Wednesday, December 24, 2014

ಹೃದಯ ಮಾರಿಕೊಂಡವರು.!!

ದಿಕ್ಕೆಟ್ಟ ಮನಸ್ಸುಗಳಿಗೆ
ಸಾವು ಸಂಭವಿಸಿ,
ಭಾವಗಳು ಸ್ತಬ್ಧವಾಗಿವೆ.!!
ನಿರ್ವಾತದಲ್ಲಿ ಕುಡಿಯೊಡೆದ ಮೊಗ್ಗು
ನಿರ್ಲಿಪ್ತವಾಗಿ ಅರಳಿದೆ.
ಮೂರು ಕಾಸಿಗೆ ಬಿಕರಿಯಾಗಿದೆ.
ಹೃದಯ ಮಾರಿಕೊಂಡವರ
ಬದುಕೇ ಹೀಗೇ,
ಇದ್ದೂ ಇಲ್ಲದಿರುವಾ ಹಾಗೇ.!!


ಪ್ರದರ್ಶನಕ್ಕಿಟ್ಟ ಹೂವಿನೆದೆಯಿಂದ
ಗಂಧ ಹೊಮ್ಮಲಿಲ್ಲ.
ಬಂದವರೆದುರು ಹದವಾಗಿ
ಬಿರಿದ ಮೈದೋರಿ,
ಬಣ್ಣಗಳ ಸುಳಿಯಲ್ಲಿ
ಎಲ್ಲವನ್ನೂ ಸೆಳೆದು,
ಜನಸಂದಣಿ ಸವೆಯುವ
ತನಕ ನಕ್ಕಂತೆ ನಿಂತು
ಇರುಳಿಗೆ ಮುರುಟಿಹೋಗುತ್ತದೆ.!!
ಹೃದಯ ಮಾರಿಕೊಂಡವರ
ಬದುಕೇ ಹೀಗೇ.
ಇದ್ದೂ ಇಲ್ಲದಿರುವ ಹಾಗೇ.!!


ಹಕ್ಕಿಯ ಪಂಜರದೊಳಿರಿಸಿ
ಸ್ವಚ್ಛಂದ ಆಗಸದೆಡೆಗೆ
ಹಾರೆಂದರೆ ಹಾರೀತೇ.??
ಯಾವುದೋ ಅಚಲ ತತ್ವದೆ
ಅನಂತ ವೃತ್ತದೆ ತೊಡರಿ,
ರೆಕ್ಕೆ ಬಿಚ್ಚಿ ಹಾರುವ
ಕನಸ್ಸು ಕಾಣುವರು.!!
ಹೃದಯ ಮಾರಿಕೊಂಡವರ
ಬದುಕೇ ಹೀಗೇ.
ಗೂಟಕ್ಕೆ ಜಡಿದ ಹಾಗೇ.!!


ಎಲ್ಲವನ್ನೂ ತೊರೆದು
ಧ್ಯಾನಸ್ಥ ಭಂಗಿಯಲ್ಲಿ ಕುಳಿತವಗೆ,
ಒಂದಷ್ಟು ಜನ ಬಣ್ಣವನ್ನು ಹೊಯ್ದರು,
ಉಳಿದವರು ವರ್ಣಗಳ ತಿಕ್ಕಿ
ಹಸನು ಮಾಡಿದರು.
ನಿರ್ವಿಕಾರ ಮೊಗದೊಳಗೆ
ನಗುವ ಮೂಡಿಸಿದರು.
ದೇವರೇ, ದೇವರೇ ಎಂದು ಕೂಗಿದರು.
ಗುಡಿ, ಪೂಜೆ, ಭಕ್ತಿ
ಮಣ್ಣು ಮಸಿ ಎಂದರು.
ಕುಳಿತವಗೆ ಉಸಿರುಗಟ್ಟಿತ್ತು.!!
ಹೃದಯ ಮಾರಿಕೊಂಡವರ
ಬದುಕೇ ಹೀಗೇ.,
ಬಣ್ಣ ಮಾಸಿದ ಹೂವಿನ ಹಾಗೇ.!!


-ಡಿ.ವಿ.ಪಿ-
೨೪/೧೨/೧೪

Wednesday, November 12, 2014

ಮಣ್ಣ ಮಡಿಲ ಸಾವುಗಳು.!!

ಎಲೆಯೊಂದು ಹತವಾಗಿ
ಟೊಂಗೆಯ ಮೇಲೆ ಬಾಗಿ,
ಟೊಂಗೆ ಕಾಂಡದ ಮೇಲೆ ವಾಲಿ,
ಕಾಂಡವು ಭಾರಕ್ಕೆ ಜೋಲುತ್ತದೆ.
ಗಾಳಿಯಬ್ಬರಕ್ಕೆ ಎದೆಯೆತ್ತಲಾಗದೆ
ಬೇರುಗಳು ಸಿಗಿದು ಹೋಗಿ
ಬುಡ ಮೇಲಾಗುತ್ತದೆ.
ಹೀಗೊಂದು ಸಾವು.!!

ಇದ್ದಕ್ಕಿದ್ದಂತೆ ಉಸಿರು
ಸೊರಗಿ,
ಬೆಳಕಿನ ಕಂಗಳಿಗೆ
ಕಾರಿರುಳು ಕವಿದು,
ಶಿರವು ಶರೀರಕ್ಕೆ ಹೊರೆಯಾಗಿ,
ಶರೀರವು ಬುಡಕ್ಕೆ ಭಾರವಾಗಿ
ಜೀವ ಹೋಗುವ ಹೊತ್ತಿಗೆ
ದೇಹವು ಮಣ್ಣಿನೊಳಗೆ
ಹೊಕ್ಕಿಕೊಳ್ಳುತ್ತದೆ.
ಇಂತೊಂದು ಸಾವು.

ಮಣ್ಣಿನ ಹೊರಗೊಂದು ಸಾವು,
ಮಣ್ಣಿನೊಳಗೊಂದು ಸಾವು.
ಮಣ್ಣಿಗೂ ಸಾವಿಗೂ ಯಾವುದೋ
ತೀರದ ಬಂದ.
ಸಾವುಗಳು ಘಟಿಸುತ್ತಲೇ ಇದೆ.
ದೇಹಗಳು ಮಣ್ಣಲ್ಲಿ ಮಣ್ಣಾಗಿ
ಕರಗುತ್ತಲೇ ಇದೆ.!!

-ಡಿ.ವಿ.ಪಿ-

Wednesday, November 5, 2014

ಕವನ ಅಂತೊಂದು ಕವನ.!!


ಕವನ :
ಜೀವ-ಭಾವಗಳ ಸಮ್ಮಿಲನ.
ಆಗಸದಡ್ಡಗಲಕ್ಕೂ ಹರವಿಕೊಂಡ ವರ್ಣ.
ಗುಪ್ತಗಾಮಿನಿಯ ಜುಳುಜುಳು ಧ್ವಾನ.
ಕಾನನದನಂತ ಮೌನ.!!

ಕವನ :
ಅರಿವಿನ ಹೂರಣ.
ಜ್ಞಾನದ ಸ್ಖಲನ.
ಸುಶ್ರಾವ್ಯ ಗಾನ.
ಒಮ್ಮೊಮ್ಮೆ ನೀರವತೆಯ ತಾನ.

ಕವನ :
ಅಂತರಂಗ ತೋಂತನಾನಾ.
ಅಂಬಿಕಾ ಪದಕಮಲ ದರ್ಶನ.
ಒಮ್ಮೊಮ್ಮೆ ಕಾಲಭೈರವನ ರುದ್ರನರ್ತನ.!!

-ಡಿ.ವಿ.ಪಿ-

Thursday, September 11, 2014

ಜೀವನ ಜಾತ್ರೆ.!!

ಊರಿಗೂರೇ ಸೀರಿಯಲ್ ಸೆಟ್
ಉಡುಪುಗಳನ್ನು ಧರಿಸಿ
ಮಿರಿ ಮಿರಿ ಮಿಂಚುತ್ತಿದೆ.
ಯಾವುದೋ ಜಾತ್ರೆಯಂತೆ.
ಜಾತ್ರೆಯ ನೆವದಲ್ಲಾದರೂ
ಹಾದಿಗುಂಟ ಹಬ್ಬಿಕೊಂಡ
ಹೂಗಳು ನಗಲಿಲ್ಲ.!!

ಜನವೋ ಜನ..
ಅಲೆಯುವವರಲ್ಲಿ ಕಳೆದುಹೋದವರೆಷ್ಟೋ
ಕಳೆದುಹೋದವರಲ್ಲಿ ಉಳಿದವರೆಷ್ಟೋ.
ಏನನ್ನೋ ಹುಡುಕುತ್ತಾ ಹೆಜ್ಜೆ ಸವೆಸುತ್ತಿದ್ದಾರೆ
ಬಹುಶಃ ಅವರವರ ಹೆಜ್ಜೆ ಗುರುತುಗಳನ್ನೇ ಇರಬಹುದು.

ಜಾತ್ರೆಗೆಂದು ಬಂದವರಲ್ಲಿ ಕೆಲವರಿಗೆ
ಹಾದಿ ತಪ್ಪಿದಂತಾಗಿ,
ಎಲ್ಲಿಗೋ ಹೋಗುವುದಕ್ಕೆ
ಮತ್ತೆಲ್ಲಿಗೋ ಹೋಗಿ,
ಮತ್ತೆಲ್ಲೊ ಹೋಗುವುದಕ್ಕೆ
ಇನ್ನೆಲ್ಲಿಗೋ ಹೋಗಿ,
ಬಂದ ದಾರಿಯಲ್ಲೇ ಸುತ್ತುತ್ತಿದ್ದಾರೆ.
ಬಹುಶಃ ಹಾದಿ ವೃತ್ತವೇನೋ.!!

ರಾಟೆ ಏರಿ ಕುಳಿತ ಒಂದಷ್ಟು ಮಂದಿಗೆ
ಗಾಳಿಯಲ್ಲಿ ತೇಲಿದಂತಾಗಿ
’ಹೋ’ ಎಂದು ಚೀರಿಕೊಳ್ಳುತ್ತಾರೆ.
ರಾಟೆ ಸುತ್ತುತ್ತಿದ್ದವನ ಕೈ
ಜೋಮು ಹಿಡಿದಂತಾಗುತ್ತದೆ.!
ವಾಯುವೇಗದಲ್ಲಿ ಓಡುತ್ತಿದ್ದ
ಮರದ ಕುದುರೆಗಳು
ಈಗೇಕೋ ಬಳಲಿದಂತಿವೆ.

ರಸ್ತೆಯ ಆಜುಬಾಜುಗಳಲ್ಲಿ ಪೇರಿಸಿಟ್ಟ
ಆಟಿಕೆಗಳು, ತಿಂಡಿ ತಿನಿಸುಗಳು.
ನಮ್ಮ ನಮ್ಮ ಕನಸು ಆಸೆಗಳಂತೆ
ಬಿಕರಿಯಾಗದೆ ಉಳಿದಿವೆ.
ಇಂದು ಯಾವುದೋ ಜಾತ್ರೆಯಂತೆ.
ಇಡೀ ಊರೇ ಸಂಭ್ರಮದಲ್ಲಿದೆ.
ಇಲ್ಲವೋ ಸಂಭ್ರಮದ ಸೋಗಿನಲ್ಲಿ.!!

-
ಡಿ.ವಿ.ಪಿ-

Wednesday, September 10, 2014

ಸೊಸೆ ಮುಟ್ಟಾಗಿದ್ದಾಳೆ.!!

ಕೊರಳಿಗೆ ತಾಳಿ ಬಿದ್ದು
ವರುಷಗಳೇ ಕಳೆದಿದೆ.
ಹೊಟ್ಟೆ ತುಂಬಿಲ್ಲ.
ಮಗುವಿನ ಹೂನಗೆ
ಮನೆಯೆಲ್ಲಾ ಹಬ್ಬಿಲ್ಲ.
ಬಂಜರಲ್ಲಿ ಹೂ ಅರಳುತ್ತದೆಯೇ?
ಅತ್ತೆ ಕೊರಗುತ್ತಾಳೆ.
ಈಗ ಮತ್ತೇ
 ಸೊಸೆ ಮುಟ್ಟಾಗಿದ್ದಾಳೆ.!!

ಎಲ್ಲಾದರು ಮಗುವಿನ ಅಳು
ಕೇಳಿದರೆ ಸಾಕು,
ಎದೆ ದಸಕ್ ಎನ್ನುತ್ತದೆ.
ಮಗುವನ್ನು ಎತ್ತಿ ಮುದ್ದಾಡಿ,
ಊರಿನ ಬೀದಿ ಬೀದಿಗಳಲ್ಲಿ
ಅಪ್ಪಾಲೆತಿಪ್ಪಾಲೆ ಆಡುವ
ಆಸೆಯಲ್ಲಿ ಮಾವ ನರಳುತ್ತಾನೆ.
ಈಗ ಮತ್ತೇ
ಸೊಸೆ ಮುಟ್ಟಾಗಿದ್ದಾಳೆ.!!

ಮನೆಯವರಲ್ಲೇ ಹೊರಗಿನವಳಾಗಿ,
ಹೊರಗಾಗಿ,
ಕೊಟ್ಟಿಗೆಯೊಳಗೆ ಹರಿದ
ಚಾಪೆಯ ಮೇಲೆ
ಸೊಸೆ ಹೊರಳುತ್ತಾಳೆ.
ಕರು ಹಸುವಿನ ಮೊಲೆಯನ್ನು
ಸೀಪುತ್ತಿದ್ದರೆ,
ಎದೆ ಉಕ್ಕುತ್ತದೆ.
ತಾಯ್ತನ ನರಳುತ್ತದೆ.

ಮಣ್ಣು ಎಷ್ಟೇ ಹದವಾಗಿದ್ದರೂ,
ಚಿಗುರು ಮೊಳೆಸುವ ಸತು ಬೀಜಕ್ಕಿರಬೇಕು.
ಈಗ ಮತ್ತೇ
ಸೊಸೆ ಮುಟ್ಟಾಗಿದ್ದಾಳೆ.!!

-ಡಿ.ವಿ.ಪಿ-

Monday, July 7, 2014

ಅಗ್ನಿಕುಂಡ.


  ನಕ್ಷತ್ರಗಳೆಲ್ಲಾ ಕಳೆದುಹೋಗಿ, ಬರಿದಾಗಿರುವಂತೆ ಗೋಚರಿಸುತ್ತಿರುವ ಬಾನು. ಅದೆಷ್ಟು ಶೋಧಿಸಿದರೂ ಹಿಡಿಯಷ್ಟೂ ಬೆಳಕಿಲ್ಲ. ತಾರಾಗಣ ನಿಶ್ಯೇಷವಾಗಿದೆ. ಚಂದ್ರನ ಸುಳಿವೂ ಇಲ್ಲ. ಬಹುಶಃ ಅಗ್ನಿಕುಂಡದಲ್ಲಿ ಅವಳೊಂದಿಗೆ ನಕ್ಷತ್ರಗಳೂ ಉರಿದುಹೋದವೇ.?? ಚಂದ್ರ ಅಗ್ನಿಶಿಖೆಗೆ ಬಲಿಯಾದೇನೆಂದು ಪಲಾಯನವಾದನೇ ಎಂಬ ಸಂದೇಹ.. ಎಲ್ಲವೂ ಹತವಾಗಿಹೋಗಿರಬಹುದೇ.?? ‘ಭೀಷ್ಮನೂ ಹತನಾಗಿಹೋದ. ತಂದೆಯ ಆಸೆಗೆ ರಾಜಪದವಿಯನ್ನು ತೊರೆದ ಭೀಷ್ಮ, ತಾಯಿ ಸತ್ಯವತಿಗಾಗಿ ವಿವಾಹದ ಆಸೆಯನ್ನೂ ತೊರೆದ ಭೀಷ್ಮ. ಪರಸ್ತ್ರೀಯರಿಗೆ ತೊಡರಾಗದ ಬ್ರಹ್ಮಚಾರಿ ಭೀಷ್ಮ ಹತನಾಗಿಹೋದ. ಈಗ ಉಳಿದಿರುವವನು ಪರಸ್ತ್ರೀಯೊಬ್ಬಳ ಹತ್ಯಗೆ ಕಾರಣವಾದ ದೇವವ್ರಥ ಮಾತ್ರ ಬದುಕಿದ್ದಾನೆ. ಬದುಕಿದಂತೆ ಸತ್ತಿದ್ದಾನೆ. ನಾನು ಮಾಡಿದ ತಪ್ಪಿಗೆ ಅಂಬೆ ಅಗ್ನಿ ಕುಂಡದೊಳಗೆ ಬೆಂದು ಹತವಾದಳು, ಹುಟ್ಟಿಗಾಗಿ ಕಾದು ಕುಳಿತಿದ್ದ ಜೀವದ ಮೊಟ್ಟೆಗಳು ತಾವು ಬೇಯುವಾಗ ನನನ್ನು ಶಪಿಸಿರಬಹುದೇ.?? ಗರ್ಭದಲ್ಲಿ ಕುಡಿಯೊಡೆಯಲಿದ್ದ ಚಿಗುರುಗಳು ಮರುಟಿಹೋಗುವುದಕ್ಕೂ ಮುನ್ನ ನನ್ನನ್ನು ನಿಂದಿಸಿರಬಹುದೇ.??  ಬಾಳಿ ಬೆಳೆದು ಬೆಳಗಲಿದ್ದ ಅವಳ ವಂಶದ ಕುಡಿಗಳು ನನ್ನ ಅಳಿವಿಗೆ ಹಂಬಲಿಸುತ್ತಿರಬಹುದೇ.?? ಬದುಕಿನುದ್ದಕ್ಕೂ ಸತ್ತು ಸತ್ತು ಬದುಕುವುದಕ್ಕಿಂತ, ಸಾಯುವುದೇ ಲೇಸು. ನನ್ನ ಸಾವಿನ ಮುಖೇನ ಅಗ್ನಿಕುಂಡ ತೃಪ್ತಿ ಹೊಂದಲಿ.!!’

ಯಾವುದು ತಪ್ಪು.?? ಯಾವುದು ಒಪ್ಪು.?? ತಪ್ಪು ಒಪ್ಪುಗಳ ನಡುವೆ ಗೊಂದಲಗಳೇರ್ಪಟ್ಟು, ತಪ್ಪು ಯಾವುದು, ಸರಿ ಯಾವುದು ಎಂಬುದನ್ನು ನಿರ್ಧರಿಸಲಾಗದಂತೆ ಸೂಕ್ಷ್ಮತೆಗಳನ್ನು ಕಳೆದುಕೊಂಡಿದೆ ನನ್ನ ಬುದ್ಧಿಮತ್ತೆ. ಆರ್ಯ ವರ್ತದಲ್ಲೇ ಧೀರನೆನಿಸಿದ್ದ ನನ್ನ ತಂದೆ ನದಿಯಲ್ಲಿ ಮೀನು ಹಿಡಿಯುವ ಹೆಂಗಸಿನೊಂದಿಗೆ ಮೋಹಿತನಾದದ್ದು ಸರಿಯೋ, ತಪ್ಪೋ.?? ತಾಯಿ ಸತ್ಯವತಿಯ ಮಕ್ಕಳ ಒಳಿತಿಗೆ ರಾಜಪದವಿಯನ್ನೂ, ವಿವಾಹಬಂದಗಳನ್ನೂ ಒಂದಿನಿತೂ ಯೋಚಿಸದೆ ತ್ಯಜಿಸುವುದಾಗಿ ನಾನು ಪ್ರತಿಜ್ಞೆ ಮಾಡಿದ್ದು ಸರಿಯೋ, ತಪ್ಪೋ.?? ಎಲ್ಲವೂ ಕೈ ಮೀರಿದ ನಂತರ ನನ್ನ ಹುಟ್ಟು ಕುಲವನ್ನೇ ಮರೆತು ಮುನಿಯಂತೆ ಕಾಡು ಸೇರಿದ್ದು ಸರಿಯೋ, ತಪ್ಪೋ.?? ಎಲ್ಲವೂ ಬ್ರಹ್ಮಲಿಖಿತ.

ಹಾಗೇ ಕಾಡಿನಲ್ಲೇ ಇದ್ದುಬಿಟ್ಟಿದ್ದರೆ ಇವೆಲ್ಲಾ ಘಟಿಸುತ್ತಲೇ ಇರಲಿಲ್ಲ. ತಾಯಿ ಸತ್ಯವತಿ ನನ್ನನ್ನು ಅಲ್ಲಿಗೇ ಹುಡುಕಿಕೊಂಡು ಬಂದು ಚಿತ್ರಾಂಗದ ಹತನಾದ ವಿಚಾರವನ್ನೂ, ಮತ್ತೊಬ್ಬ ತಮ್ಮ ವಿಚಿತ್ರವೀರ್ಯ ರೋಗಗ್ರಸ್ಥನಾಗಿ ದೇಶವನ್ನಾಳಲಶಕ್ತನೆಂಬ ವಿಚಾರವನ್ನೂ ಹೇಳಿ, ಶಂತನು ಮಹಾರಾಜ ಆಳಿದ ದೇಶವು ಪಾಲಕರಿಲ್ಲದೆ ನರಳುತ್ತಿರುವುದಾಗಿ ಹೇಳಿ, ಮತ್ತೆ ಆಡಳಿತವನ್ನು ನನಗೆ ವಹಿಸಿಕೊಳ್ಳಬೇಕೆಂದು ಕೇಳಿದಾಗ. ಅದೆಲ್ಲಿತ್ತೊ ವಂಶ ವ್ಯಾಮೋಹ, ಮುನಿಯಂತಿದ್ದ ನಾನು ಅಮ್ಮನ ಮಾತಿಗೆ ಒಪ್ಪಿಬಿಟ್ಟೆನಲ್ಲ. ಬಹುಶಃ ಕ್ಷತ್ರಿಯ ರಕ್ತಕ್ಕೆ ಯುದ್ಧದಲ್ಲಿ ದೊರೆಯುವ ಸುಖ ಧ್ಯಾನದಲ್ಲಿ ದೊರೆಯುವುದಿಲ್ಲ.!!

ಇನ್ನು ವಂಶದ ಬೆಳವಣಿಗೆಗೆ ತಮ್ಮ ವಿಚಿತ್ರವೀರ್ಯನಿಗೆ ಮದುವೆಯೊಂದನ್ನು ಮಾಡಬೇಕೆಂಬ ಯೋಚನೆ ಮಾಡುತ್ತಿರುವಾಗಲೇ., ಕಾಶೀರಾಜ ಪ್ರತಾಪಸೇನ ತನ್ನ ಪುತ್ರಿಯರಾದ ಅಂಬೆ, ಅಂಬಿಕೆ, ಅಂಬಾಲಿಕೆಯರ ಸ್ವಯಂವರ ಏರ್ಪಡಿಸಿ ಹಲವು ರಾಜರಿಗೆ ಆಮಂತ್ರಣ ಕಳುಹಿಸಿದ ವಿಚಾರ ಕಿವಿಗೆ ಬಿತ್ತಲ್ಲ. ಹಸ್ತಿನಾವತಿಯ ದೇಶದವರಿಗೆ ಆಮಂತ್ರಣವನ್ನೂ ಕಳುಹಿಸದ ಪ್ರತಾಪಸೇನನ ಬಗ್ಗೆ ಕೋಪ ಉಕ್ಕಿ ಹರಿಯಿತು. ಪ್ರತಿಷ್ಟೆಗೆ ಸ್ವಯಂವರ ನಡೆಯುತ್ತಿದ್ದ ಜಾಗಕ್ಕೆ ಧಾಳಿಯಿಟ್ಟಾಗ., ನೆರೆದಿದ್ದ ರಾಜರುಗಳೆಲ್ಲ ಹೆದರಿ ಹಿಂದೆ ಸರಿದುಬಿಟ್ಟರಲ್ಲ. ಆದರೆ ಯಾರವನು ಸೌಭದೇಶದ ರಾಜಕುಮಾರ.?? ಸಾಲ್ವನೆಂದಲ್ಲವೇ ಅವನ ಹೆಸರು. ಅವನು ಮಾತ್ರ ದೇಹದಲ್ಲಿ ತ್ರಾಣವಿರುವವರೆಗೆ ಹೋರಾಡಿದನಲ್ಲ. ಅವನ ಆವೇಶ ಕಂಡು ನನಗೆ ಸರಿಯಾದ ಎದುರಾಳಿ ಎಂದು ಹೋರಾಟಕ್ಕಿಳಿದು ಅವನಿಗೂ ಮಣ್ಣು ಮುಕ್ಕಿಸಿ ಬಂದಾಗ ನನ್ನ ತಾಯಿ ಸತ್ಯವತಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ತನ್ನ ರೋಗಗ್ರಸ್ಥ ಮಗನಿಗೆ ಮೂವರು ಸುಂದರವಾದ ರಾಜಕುಮಾರಿಯರನ್ನು ತಂದುಕೊಳ್ಳುವುದಕ್ಕೆ ಎಂತವರಿಗೂ ಸಂತೋಷವಾಗಲೇಬೇಕು.

ಹಿರಿಯವಳು ಅಂಬೆ ಸೌಭ ದೇಶದ ರಾಜಕುಮಾರ ಸಾಲ್ವನನ್ನು ಪ್ರೀತಿಸುತ್ತಿದ್ದಳಂತಲ್ಲ, ಆದರೆ ನನಗೆ ಅದು ತಿಳಿಯುವುದಾದರೂ ಹೇಗೆ?? ಅವನೂ ನನ್ನಂತೆಯೇ ಪ್ರತಿಷ್ಠೆಗೆ ಹೋರಾಡುತ್ತಿದ್ದಾನೆ ಎಂದು ಭಾವಿಸಿದ್ದೆನಲ್ಲ. ಹೆಂಗರುಳ ಬಗ್ಗೆ ಕೊಂಚವೂ ತಿಳುವಳಿಕೆ ಇಲ್ಲದ ನನಗೆ ಅವಳ ಮನಸ್ಸಿನೊಳಗೆ ನಡೆಯುವ ತೊಳಲಾಟಗಳು ಹೇಗೆ ತಿಳಿಯಬೇಕು. ಹುಟ್ಟಿದಾಗಲೇ ತಾಯಿಯನ್ನು ಕಳೆದುಕೊಂಡಾತ. ಮಲತಾಯಿ ಸತ್ಯವತಿ ನನ್ನನ್ನು ರಾಜಕುಮಾರ ಎಂಬಂತೆ ನೋಡಿದಳೆ ವಿನಃ ಪುತ್ರನಂತೆ ಭಾವಿಸಿ ತಾಯಿಯ ಸಲುಗೆ ತೋರಲಿಲ್ಲ. ಇನ್ನೂ ಬ್ರಹ್ಮಚಾರಿಯಾದ ನನಗೆ ಹೆಣ್ಮನಗಳ ಮಿತಿಯೂ, ವಿಸ್ತಾರವೂ ತಿಳಿದಿಲ್ಲ. ಅದನ್ನು ಅರಿಯದ ಅಂಬೆ ಒಂದರ ಹಿಂದೊಂದು ಸಾಲಾಗಿ ಬಿಟ್ಟ ವಾಗ್ಬಾಣಗಳು ನನ್ನ ತ್ರಾಣವನ್ನೇ ಕದಲಿಸಿತಲ್ಲ.

ಅದಾವ ಪುರುಷಾರ್ಥಕ್ಕಾಗಿ, ಹಸುಳೆಯಂತಹ ತರುಣಿಯರನ್ನು ಅಪಹರಿಸಿಕೊಂಡು ಬಂದದ್ದು?? ಅಪ್ಪನ ಆಸೆಗೆ, ತಾಯಿಯ ಆಸ್ಥೆಗೆ ವಿವಾಹದ ಆಸೆಗಳನ್ನು ಬಲಿಗೊಟ್ಟು ಬ್ರಹ್ಮಚಾರಿಯಾದ ನಿನಗೇಕೆ ತರುಣಿಯರನ್ನು ಅಪಹರಿಸುವ ಉಸಾಬರಿ.?? ಯಾವುದೋ ಬೇಟೆಯಾಡಿದ ಪ್ರಾಣಿಗಳ ತೆರದಿ ಕೈಕಾಲುಗಳನ್ನು ಕಟ್ಟಿ, ರಥದೊಳಗೆ ತುಂಬಿಕೊಂಡು ಬಂದೆಯಲ್ಲ. ನಮ್ಮನ್ನು ಮನುಷ್ಯರೆಂದು ತಿಳಿದೀಯೋ ಇಲ್ಲವೋ.?? ಮನುಷ್ಯರೆಂದ ಮೇಲೆ ನಮಗೂ ಮನಸ್ಸೊಂದಿದೆ ಎಂಬುದನ್ನು ಮರೆತೆಯೇನು.?? ಮನಸ್ಸೊಂದಿದ್ದ ಮೇಲೆ ಅದು ತನ್ನೊಳಗೆ ಆಸೆಗಳ ಸೌಧವೊಂದನ್ನು ಸೃಜಿಸಿಕೊಂಡಿರುತ್ತದೆ ಎಂಬುದು ನಿನ್ನ ಬುದ್ಧಿಗೆ ನಿಲುಕಲಿಲ್ಲವೇನು.?? ಸೌಭದೇಶದ ದೊರೆ ಸಾಲ್ವನಿಗೆ ನನ್ನ ಮನಸ್ಸನ್ನರ್ಪಿಸಿದ್ದೆನಲ್ಲ. ಅವನನ್ನಲ್ಲದೆ ಪರರನ್ನು ನನ್ನ ಪತಿಯ ಜಾಗಕ್ಕೆ ತರಲೊಲ್ಲೆ. ಇನ್ನೂ ಇಲ್ಲಿ ನನ್ನ ವಿವಾಹದ ಪ್ರಸ್ಥಾಪವದಲ್ಲಿ ಅದು ನನ್ನ ದೇಹದೊಂದಿಗೆ ಮಾತ್ರ.”

ಅವಳ ಮಾತುಗಳು ನನ್ನೊಳಗೆ ನೇರವಾಗಿ ನೆಟ್ಟಿತಲ್ಲ. “ಅದಾವ ಪುರುಷಾರ್ಥಕ್ಕಾಗಿ ಹಸುಳೆಯಂತಹ ತರುಣಿಯರನ್ನು ಅಪಹರಿಸಿಕೊಂಡು ಬಂದದ್ದು?? ಅಪ್ಪನ ಆಸೆಗೆ, ತಾಯಿಯ ಆಸ್ಥೆಗೆ ವಿವಾಹದ ಆಸೆಗಳನ್ನು ಬಲಿಗೊಟ್ಟು ಬ್ರಹ್ಮಚಾರಿಯಾದ ನಿನಗೇಕೆ ತರುಣಿಯರನ್ನು ಅಪಹರಿಸುವ ಉಸಾಬರಿ??” ಎಂಬ ಅವಳ ಪ್ರಶ್ನೆಗೆ  ಉತ್ತರವಿರಲಿಲ್ಲ. ಅದೇಕೋ ನನ್ನೊಳಗಿನ ಗಂಡುತನ ಮೊನಚಾದ ಮಾತುಗಳಿಗೆ ಮರುಗುತ್ತಿದೆ. ಎದೆಯೇರಿಸಿದ ಧನಸ್ಸಿನಂತಹ ಮೈಕಟ್ಟು. ಉಕ್ಕಿನಂತಹ ಮಾಂಸ ಖಂಡಗಳು. ಅಸಾಧಾರಣ ಎತ್ತರ. ಉಬ್ಬಿಕೊಂಡ ನರಗಳು. ಒಂದೇ ಹೊಡೆತಕ್ಕೆ ಎಡುರಾಳಿಯನ್ನು ಮಣ್ಣುಮುಕ್ಕಿಸಬಲ್ಲ ಕಸುವು. ಒಮ್ಮೆ ಯುದ್ಧಭೂಮಿಯಲ್ಲಿ ಬಲವಾಗಿ ಅಡಿಯೂರಿದರೆ ಎದುರಾಳಿಗಳ ಮನಸ್ಸಿನಲ್ಲಿ ಕೋಲಾಹಲ ಎಬ್ಬಿಸಬಲ್ಲಂತಹ ಮೀನಖಂಡ. ಆದರೂ ಆಕೆ ಅದಾವ ಪುರುಷಾರ್ಥಕ್ಕೆ ಎಂದು ಕೇಳುತ್ತಿರುವಾಗ ನಿರುತ್ತರನಾಗಿ ನಿಂತುಕೊಂಡಿರುವುದಕ್ಕೆ ನನಗೇ ನಾಚಿಕೆಯಾಯಿತು. ಮರು ಮಾತನಾಡದೆ ಅವಳನ್ನು ರಥದಲ್ಲಿ ಸೌಭದೇಶಕ್ಕೆ ಕಳುಹಿಸಿಕೊಟ್ಟೆ. ಆದರೂ ಅವಳ ಮಾತಿನ ಇರಿತಕ್ಕೆ ಘಾಸಿಯಾದ ಎದೆಯಿಂದ ರಕ್ತ ಒಸರುತ್ತಲೇ ಇರಬಹುದೇ ಎಂಬ ಸಂಶಯ.

ಇದಾದ ಎರಡು ದಿನಗಳಲ್ಲಿ ಚೇತರಿಸಿಕೊಂಡು, ಉಳಿದ ಇಬ್ಬರನ್ನು ನನ್ನ ತಮ್ಮ ವಿಚಿತ್ರವೀರ್ಯನಿಗೆ ಮದುವೆ ಮಾಡುವುದೆಂದೂ, ಮತ್ತು ಇಡೀ ಆರ್ಯ ವರ್ತದಲ್ಲೇ ಹಿಂದೆಂದೂ ನಡೆದಿರದ, ಮುಂದೆಂದೂ ನಡೆಯಲಾಗದಷ್ಟು ವೈಭವಪೂರಿತವಾಗಿ ವಿವಾಹವನ್ನು ನೆರವೇರಿಸಬೇಕೆಂದು ನಿರ್ಧರಿಸಿದೆ, ವಿವಾಹದ ತಯಾರಿಯಲ್ಲಿರುವಾಗ, ಅಂಬೆಯನ್ನು ಸೌಭದೇಶಕ್ಕೆ ಕರೆದುಕೊಂಡು ಹೋಗಿದ್ದ ಸೇವಕರು ಸೋತ ಮುಖದಲ್ಲಿ ಎದುರಾದದ್ದನ್ನು ಕಂಡು ಏನೋ ಕೆಡುಕು ಸಂಭವಿಸಿರಬಹುದೆಂದು ಊಹಿಸಿದೆ. ಏನೆಂದು ಬಾಯಿಬಿಟ್ಟು ಕೇಳುವಷ್ಟರಲ್ಲಿ ಸೌಭದೇಶದ ರಾಜ ಸಾಲ್ವನ ಮೇಲೆ ಮೋಹಿತಳಾಗಿ ಹಸ್ತಿನಾವತಿಯನ್ನು ತೊರೆದಿದ್ದ ಅಂಬೆ ಗುಂಪಿನಲ್ಲಿ ನಡೆದು ಬರುತ್ತಿರುವುದನ್ನು ಕಂಡು ಆಶ್ಚರ್ಯವಾಯಿತು. ಏನಾಯಿತು ಎಂದು ಕೇಳುವುದಕ್ಕೂ ಧೈರ್ಯ ಬಾರದೆ. ಸುಮ್ಮನೇ ನೋಡುತ್ತಾ ನಿಂತೆ. ಅವಳೂ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಳು. ಅವಳ ಕಣ್ಣುಗಳಿಂದು ನೀರು ಹರಿದು ಕೆನ್ನೆಯ ಮೇಲೆ ತೊರೆಯೊಂದನ್ನೇ ಸೃಷ್ಟಿಸಿದಂತೆ ಕಾಣುತ್ತಿತ್ತು. ಕಣ್ಣುಗಳಲ್ಲಿ ಸೋತ ಭಾವ. ದೇಹ ಆಯಾಸಗೊಂಡಂತೆ ಕುಗ್ಗಿತ್ತು. ಹಿಂದೆ ಅವಳು ಹೇಳಿದ್ದ ಮಾತುಗಳೆಲ್ಲಾ ಮತ್ತೆ ಕಿವಿಯ ಮೇಲೆ ಅಪ್ಪಳಿಸುತ್ತಿದ್ದವು. ಮಾತುಗಳು ನನ್ನನ್ನು ಮಾತನಾಡಲು ಬಿಡದೆ ಮೌನಕ್ಕೆ ಎಡೆ ಮಾಡಿಕೊಟ್ಟಿದ್ದವು. ಅವಳೂ ಮೌನವಾಗಿದ್ದಳು. ಆದರೆ ಮೌನಗಳೊಳಗೆ ಅದೆಷ್ಟೋ ಪ್ರಬಲ ಮೊರೆತಗಳಿರುವುದು ಖಾತ್ರಿಯಾಗಿತ್ತು. ಕೈ ತಟ್ಟಿಯಾರಲ್ಲಿ.?? ಈಕೆಯನ್ನು ವಿಶ್ರಾಂತಿಗೆ ಕರೆದೊಯ್ಯಿರಿ.” ಎಂದು ಹೇಳಿ ಮುಂದೆ ಹೋದೆ. ಅವಳು ನನ್ನನ್ನೇ ನೋಡುತ್ತಿದ್ದಳು. ಹಸ್ತಿನಾವತಿಯ ಪಾಲಕನಾದ ನನಗೆ ಸೇವಕರೆದುರು ಏನಾದರೂ ಅಂದುಬಿಟ್ಟಾಳೋ ಎಂದು ವಿಶ್ರಾಂತಿ ಸೂಚಿಸಿ ಪಲಾಯನವಾಗಲು ಪ್ರಯತ್ನಿಸಿದ್ದು ಅವಳಿಗೂ ತಿಳಿಯಿತೇನೋ.!!

ಮರುದಿನ ಬೆಳಿಗ್ಗೆ ಆಕೆಯನ್ನು ಭೇಟಿಯಾಗಲು ಅವಳ ಕೋಣೆಗೆ ಹೋದೆ. ಅವಳು ಕಿಟಕಿಯೆಡೆಗೆ ಮುಖ ಮಾಡಿ, ಉದಯಿಸುತ್ತಿದ್ದ ಸೂರ್ಯನನ್ನು ನೋಡುತ್ತಿದ್ದಳು. ಬೆಳಕಿಗೆ ಹಾತೊರೆಯುತ್ತಿದ್ದ ಅವಳ ದೇಹ ಬೆಳಕನ್ನು ಮೈದುಂಬಿ ಆಸ್ವಾದಿಸುತ್ತಿತ್ತು. ಹೆಜ್ಜೆ ಸಪ್ಪಳ ಕೇಳಿ ಒಮ್ಮೆ ತಿರುಗಿ ನೋಡಿ ನಿರ್ಲಿಪ್ತವಾಗಿ ಮತ್ತೆ ಬೆಳಕಿನೆಡೆಗೆ ಮುಖ ಮಾಡಿದಳು. “ಕುಳಿತುಕೊಳ್ಳಿಎಂಬ ಅವಳ ಮಾತಿಗೆ ಮರುಮಾತನಾಡದೆ ಹೋಗಿ ಕುಳಿತೆ. ಮಾತನ್ನು ಶುರು ಮಾಡುವುದಕ್ಕೂ ಮುನ್ನ ಬಾಗಿ ಹಾಕಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡೆ. ಏಕೆಂದರೆ ನನ್ನ ಬ್ರಹ್ಮಚಾರ್ಯ ಸೋಗಿನದು ಎಂದು ಯಾರಿಗಾದರೂ ಅನ್ನಿಸಿಬಿಟ್ಟರೆ, ಅಲ್ಲಿಗೆ ನನ್ನ ಬ್ರಹ್ಮಚರ್ಯ ಅರ್ಥರಹಿತವಾಗುತ್ತದೆ. “ನಿಮ್ಮಿಂದ ನನಗೆ ನ್ಯಾಯ ಸಿಗಬೇಕುಎಂದಾಗ, ನನಗೆ ಯಾವ ರೀತಿಯ ನ್ಯಾಯ ಎಂಬುದೇ ತಿಳಿಯಲಿಲ್ಲ. ಆಕೆಯ ಚಿತ್ತದಂತೆ ಸಾಲ್ವ ರಾಜನೆಡೆಗೆ ಕಳುಹಿಸಿದರೂ ತಕರಾರು ತೆಗೆಯುತ್ತಿದ್ದಾಳಲ್ಲ ಎಂಬ ಕೋಪವೂ ಬಂತು. “ಯಾವ ನ್ಯಾಯ.??” ಏರುದನಿಯಲ್ಲೇ ಕೇಳಿದೆ. ನನ್ನ ಮಾತಿಗೆ ಬೆಚ್ಚಿದವಳಂತೆ, ಬೆಳಕಿನೆಡೆಗೆ ಮುಖ ಮಾಡಿದ್ದವಳು ನನ್ನೆಡೆಗೆ ತಿರುಗಿದಳು.

ನಿಮ್ಮ ಮಾತಿನಂತೆ ನಿಮ್ಮನ್ನು ನೀವು ಮೆಚ್ಚಿದವನಲ್ಲಿಗೆ ಕಳುಹಿಸಿಕೊಟ್ಟಿದ್ದೆನಲ್ಲನಾನು ಯಾವ ತಪ್ಪೂ ಮಾಡದವನ ಹಾಗೆ ಕೇಳಿದ್ದೆ. ಅದಕ್ಕೆ ಆಕೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ, “ನನ್ನ ತಂದೆ ನಿಮ್ಮನ್ನು ಅಹ್ವಾನಿಸದೆಯೂ ನೀವು ನಮ್ಮ ಸ್ವಯಂವರಕ್ಕೇಕೆ ಬಂದಿರಿ.??” ಅವಳು ಪ್ರಶ್ನೆ ಕೇಳಬಹುದು ಎಂದು ಊಹಿಸಿಯೂ ಇಲ್ಲದ ನಾನುಹಸ್ತಿನಾವತಿ ರಾಜಪರಂಪರೆ ದೊಡ್ಡದು, ನಮ್ಮನ್ನು ಗಣನೆಗೆ ತೆಗೆದುಕೊಳ್ಳದಾಗ ನಮಗೆ ಕೋಪ ಬಂದಿತು, ಆದ್ದರಿಂದ ನಿಮ್ಮನ್ನು ಗೆಲ್ಲಲೇಬೇಕೆಂದು ನಿಶ್ಚಯಿಸಿ ಬಂದಿದ್ದೆಎಂದು ನೇರವಾಗಿ ಉತ್ತರಿಸಿದೆ. ಅದಕ್ಕೆ ಅವಳುಅಂದರೆ ಪ್ರತಿಷ್ಠೆಗೆ ಅಲ್ಲವೇ.?? “ ಎಂದಾಗ ನನಗೆ ಹೇಗೆ ಉತ್ತರಿಸಬೇಕೆಂದು ತೋಚಲಿಲ್ಲಿ. “ನಿಮ್ಮ ಹಾಗೆ ಪರ ರಾಜರಿಗೂ ಪ್ರತಿಷ್ಠೆಯ ಹಂಗು ಇರುವುದಿಲ್ಲವೇ.?? ನಾನು ಮೆಚ್ಚಿದ ಸಾಲ್ವ ಮಹರಾಜನೂ ತನ್ನ ಪ್ರತಿಷ್ಠೆಗೆ ನನ್ನನ್ನು ತಿರಸ್ಕರಿಸಿದ. ಸ್ವಯಂವರದಲ್ಲಿ ನಿಮ್ಮೆದುರು ಸೋತ ಅವರು ನನ್ನನ್ನು ಸ್ವೀಕರಿಸುತ್ತಿಲ್ಲ. ನನಗಿಂತ ಅವರನ್ನು ಸೋಲು ಕಾಡುತ್ತಿದೆ. ಸೋಲಿಗೆ ಕಾರಣವಾದದ್ದು ನಿಮ್ಮ ಗೆಲುವುಹೇಗೋ ಅವಳನ್ನು ಅವಳು ಮೆಚ್ಚಿದ ಸಾಲ್ವನಲ್ಲಿಗೆ ಕಳುಹಿಸಿಕೊಟ್ಟು ಆದ ತಪ್ಪನ್ನು ತೊಳೆದುಕೊಂಡಂತಾಯಿತು ಎಂದು ಭಾವಿಸಿದ್ದ ನನಗೆ, ಅವಳು ನನ್ನ ಗೆಲುವಿನಿಂದಲೇ ಅವಳ ಪರಿಸ್ಥಿತಿ ಬಂದಿದೆ ಎಂದಾಗ ಮತ್ತೇ ತಪ್ಪಿನ ಪರಿತಾಪ ಆವರಿಸಿತು.

ಕಳೆದುಕೊಂಡದ್ದನ್ನು ಕಳೆದುಕೊಂಡಲ್ಲಿಯೇ ಹುಡುಕಬೇಕೆಂದು ಇಲ್ಲ್ಗೇ ಬಂದಿದ್ದೇನೆ. ನನ್ನ ಕಲ್ಪನೆಯ ಬದುಕನ್ನು ನಾನು ಕಳೆದುಕೊಂಡದ್ದು ಇಲ್ಲಿಯೇಎಂದಾಗ ಈಕೆಯನ್ನು, ಈಕೆಯ ಸಮಸ್ಯೆಯನ್ನು ಬಗೆಹರಿಸುವ ಮಾರ್ಗವನ್ನು ಹುಡುಕತೊಡಗಿದ್ದೆ, ಆಗ ಅವಳುಆಗಿದ್ದು ಆಯಿತು, ಹೋಗಿದ್ದು ಹೋಯಿತು. ಎಲ್ಲದಕ್ಕೂ ನಿಮ್ಮನ್ನು ದೂಷಿಸುವುದಿಲ್ಲ, ವಿಧಿಯ ರೂಪದಲ್ಲಿ ನೀವು ಬಂದು, ಎಲ್ಲದಕ್ಕೂ ತಿರುವು ಕೊಟ್ಟಿರಿ. ಆದರೆ ತಿಳಿದೊ, ತಿಳಿಯದೆಯೊ ಇದಕ್ಕೆಲ್ಲಾ ನೀವು ಕಾರಣರಾಗಿರುವುದು ಸತ್ಯ. ಆದ್ದರಿಂದ ನನಗೆ ನಿಮ್ಮಲ್ಲಿ ನ್ಯಾಯ ಸಿಗಬಹುದೆಂದು ಮತ್ತೆ ಇಲ್ಲೆ ಬಂದೆಎಂದಳು. ಅದಕ್ಕೆ ನಾನುಆಗಲಿ. ಈಗ ನಾನು ಮಾಡಬೇಕಾದದ್ದಾದರೂ ಏನು.??” ಎಂದೆ. ತಕ್ಷಣ ಅವಳು ನನ್ನ ಕೈ ಹಿಡಿದುಸ್ವಯಂವರದಲ್ಲಿ ನೆರೆದಿದ್ದ ಅಷ್ಟೂ ಅರಸರನ್ನು ಸೆದೆಬಡಿದ ನಿಮ್ಮ ಪೌರುಷ ಎಂತಹ ಹೆಣ್ಣನ್ನಾದರೂ ಸೆಳೆಯುತ್ತದೆ, ಕೊಟ್ಟ ಯಾವುದೋ ಮಾತಿಗೆ ಯಾವುದೇ ಸ್ತ್ರೀಯರನ್ನು ಕಣ್ಣೆತ್ತಿ ನೋಡದ ನಿಮ್ಮ ನಿಷ್ಠೆಯ ಬಗ್ಗೆ ಗೌರವ ಮೂಡುತ್ತದೆ. ರಾಜಪದವಿ ದೊರಕದೆಯೂ ವಂಶದ ಖ್ಯಾತಿಯನ್ನು ಉಳಿಸಲು ಹೋರಾಡುತ್ತಿರುವ ನಿಮ್ಮ ನಿಷ್ಕಳಂಕ ತ್ಯಾಗ ನನ್ನನ್ನು ಬೆರಗುಗೊಳಿಸುತ್ತದೆ. ವರಿಸಿದರೆ ನಿಮ್ಮನ್ನೇ ವರಿಸಬೇಕು. ದಯವಿಟ್ಟು ಸ್ವೀಕರಿಸಿ.”

ಅವಳ ಮಾತುಗಳು ನನ್ನನ್ನು ಕದಲಿಸಿದವು, ನಾನೂ ದಷ್ಟಪುಷ್ಟವಾಗಿ ಬೆಳೆದ ಗಂಡು., ಎಷ್ಟು ಬೇಕಾದರೂ ವರಿಸಬಹುದಾದ ಆರ್ಯಕುಲದ ರಾಜಕುಮಾರ. ಪೂರ್ಣಚಂದಿರನ ಕಂಡ ಕಡಲ ತೆರೆಗಳಂತೆ ಕಾಮನೆಗಳು ಉಕ್ಕಿ, ಅವಳ ಮಾತಿಗೆ ಒಪ್ಪಿಬಿಡಲೇ ಎನ್ನಿಸಿತು. ಮರುಕ್ಷಣವೇ ನನ್ನೊಳಗಿನ ಸುಪ್ತ ಮನಸ್ಸು ನನ್ನನ್ನು ಬಡಿದೆಬ್ಬಿಸಿತು, “ಅದು ಆಗದ ವಿಚಾರ. ನಾನು ಕೊಟ್ಟ ಮಾತಿಗೆ ಎಂದೂ ತಪ್ಪ್ವುದಿಲ್ಲ. ನೀನು ಮಾತ್ರವಲ್ಲ, ನನ್ನ ಬದುಕಿನಲ್ಲಿ ಯಾವ ಹೆಣ್ಣಿಗೂ ಸ್ಥಾನವಿಲ್ಲನೇರವಾಗಿ ಹೇಳಿದೆ. “ನಿಮ್ಮ ಅಪ್ಪ ಆಸೆ ಪಟ್ಟ ನಿನ್ನ ತಾಯಿಗಾಗಿ ನೀವು ಮಾತುಕೊಟ್ಟದ್ದು. ಆದರೆ ನಿಮ್ಮ ತಂದೆ ಈಗಿಲ್ಲ. ಆದರೂ ಕೊಟ್ಟ ಮಾತಿಗೆ ಏಕಿಷ್ಟು ಮನ್ನಣೆ.??” ಎಂದು ಅವಳು ಹೇಳಿದಾಗ ಉತ್ತರವನ್ನು ಸಿದ್ಧಪಡಿಸಿಕೊಂಡಂತೆಮಾತು ಕೊಡುವುದು ಎಂದರೆ ಸುಲಭದ ವಿಚಾರವಲ್ಲ. ನಾಲಿಗೆ ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ. ಕೊಟ್ಟ ಮಾತನ್ನು ಮುರಿದರೆ ನನ್ನ ರಾಜ್ಯದ ಪ್ರಜೆಗಳು ಹಾಗೂ ಮುಂದಿನ ಪೀಳಿಗೆಯವರು ನನ್ನನ್ನು ಕೊಟ್ಟ ಮಾತಿನಂತೆ ನಡೆಯದ ದುಷ್ಟ ಎಂದು ದೂಷಿಸುವುದಿಲ್ಲವೇ,??. ನಾನು ವಿವಾಹವಾಗಲಾರೆ. ನನ್ನನ್ನು ಕ್ಷಮಿಸು.” ಎಂದಾಗ ಅವಳ ಮುಖ ಬಾಡಿಕೊಂಡಿತು.

ಸ್ವಲ್ಪ ಸಮಯ ಮೌನವಾದ ಆಕೆ ಮತ್ತೆ ಮಾತನಾಡಿದಳು. “ ಇನ್ನು ನಿಮ್ಮನ್ನು ಒತ್ತಾಯಿಸುವುದಿಲ್ಲ. ನನ್ನ ತಂಗಿಯರೊಡನೆ ನನ್ನನ್ನೂ ನಿಮ್ಮ ತಮ್ಮನಿಗೆ ಕೊಟ್ಟು ವಿವಾಹ ನೆರವೇರಿಸಿರಿಎಂದಾಗ ವಿಚಾರದ ಆಗುಹೋಗುಗಳನ್ನು ಕೆದುಕತೊಡಗಿದೆ.ಎಲ್ಲವನ್ನೂ ಯೋಚಿಸಿದ ನಂತರಈಗ ಕಾಲ ಮೀರಿಹೋಗಿದೆ. ನಿನ್ನನ್ನು ನೀನು ಪ್ರೇಮಿಸಿದವನಲ್ಲಿಗೆ ಕಳುಹಿಸಿಕೊಟ್ಟ ವಿಚಾರ ಎಲ್ಲರಿಗೂ ತಿಳಿದುಹೋಗಿದೆ. ಪರಪುರುಷನನ್ನು ಹುಡುಕಿಕೊಂಡು ಹೋದ ನಿನ್ನನ್ನು ರಾಜ ಪೀಠಸ್ಥನಾದ ನನ್ನ ತಮ್ಮನಿಗೆ ತಂದುಕೊಂಡೆ ಎಂದರೆ, ಅಪಖ್ಯಾತಿ ನಮ್ಮ ವಂಶಕ್ಕೆ ಬರುತ್ತದೆಎಂದು ಅವಳ ಕಣ್ಣುಗಳಲ್ಲಿ ತೊರೆಗಳು ಸೃಷ್ಟಿಯಾಗಿಹೋಗಿದ್ದವು. “ಹಾಗಾದರೆ ನನ್ನ ಗತಿ.??” ಎಂದು ಅವಳು ಕೇಳಿದ್ದಕ್ಕೆ ನಾನುಯಾವುದಾದರೂ ಒಳ್ಳೆಯ ವರನನ್ನು ಹುಡುಕಿ ನಿನ್ನ ವಿವಾಹವನ್ನು ನೆರವೇರಿಸುತ್ತೇನೆಎಂದಾಗ. ಅವಳು ನನ್ನನ್ನು ದೃಷ್ಟಿಸಿ ನೋಡಿ. “ಈಗ ಅದರ ಮಾತು ಬೇಡ. ನನಗೆ ಆಯಾಸವಾಗುತ್ತಿದೆ, ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತೇನೆಎಂದಳು. ನಾನು ಅವಳ ಕೋಣೆಯಿಂದ ಹೊರ ನಡೆದೆ.

ಸಂಜೆ ಸಖಿಯರೆಲ್ಲಾ ಯಾವುದೋ ಗೊಂದಲದಲ್ಲಿರುಂತೆ ತೋರಿತು. ಬಹುಶಃ ಏನೋ ಅಮೂಲ್ಯ ವಸ್ತುವನ್ನು ಕಳೆದುಕೊಂಡು ಹುಡುಕುತ್ತಿರಬಹುದು. ಏನಾಯಿತು ಎಂದು ವಿಚಾರಿಸಿದೆ. ಅಂಬೆ ಕಾಣುತ್ತಿಲ್ಲ ಎಂದರು. ನನಗೆ ಆಶ್ಚರ್ಯವಯಿತು. ಜೊತೆಗೆ ಭೀತಿಯೂ ಅವರಿಸಿತು. ನಾನು ಅವಳ ಬದುಕಿಗೆ ಬರಲಾಗಿ ಅವಳು ಏನೆಲ್ಲಾ ಅನುಭವಿಸುವಂತಾಯಿತು ಎಂಬ ಬೇಸರ. ಅಲ್ಲಿದ್ದ ಸೈನಿಕರಿಗೆ ಅಂಬೆಯನ್ನು ಹುಡುಕುವಂತೆ ಆಜ್ಞಾಪಿಸಿದೆ. ನಾನು ಆಕೆಯ ಕೋಣೆಗೆ ಹೋದೆ ಅವಳು ತನ್ನ ಒಡವೆಗಳನ್ನೆಲ್ಲಾ ಕಳಚಿಟ್ಟು ಹೋಗಿದ್ದಳು. ರಾಜ ಪುತ್ರಿ ವೈಭೋಗವನ್ನೆಲ್ಲಾ ತೊರೆಯಲು ಸಾಧ್ಯವೇ ಎನ್ನಿಸಿತು. ಬದುಕು ಅವಳಿಗೆ ಬೆನ್ನು ತೋರಿಸಿದ್ದಕ್ಕೆ ಅವಳೂ ಬದುಕಿಗೆ ಬೆನ್ನು ತೋರಿಸಿ ಪರಮಾರ್ಥದ ಶೋಧನೆಗೆ ಹೋಗಿರಬಹುದು ಎನ್ನಿಸಿತು. ಆರ್ಯ ರಕ್ತದವರು ಧ್ಯಾನದಲ್ಲಿ ತೊಡಗುವುದು ಎಷ್ಟು ಕಷ್ಟ ಎಂಬುದರ ಅರಿವಿದ್ದ ನನಗೆ ಅವಳು ಒಂದು ವೇಳೆ ಹೋಗಿದ್ದರೂ ಹಿಂದಿರುಗಿ ಬಂದೇ ಬರುತ್ತಾಳೆ ಎಂಬ ನಂಬಿಕೆಯಿತ್ತು. ಮೂರು ದಿನಗಳ ಶೋಧನೆಯ ನಂತರ ಸೈನಿಕರು ಅಂಬೆ ಸಿಗಲಿಲ್ಲ ಎಂಬ ವರ್ತಮಾನವನ್ನು ತಂದೊಪ್ಪಿಸಿದರು. ನನಗೆ ಅಸಹಾಯಕನಾದಂದೆ ಭಾಸವಾಯಿತು.

ವಿಚಿತ್ರವೀರ್ಯ, ಅಂಬಿಕೆ, ಅಂಬಾಲಿಕೆಯರ ಮದುವೆಯು ಮೊದಲೇ ಊಹಿಸಿದ್ದಂತೆ ಅದ್ಧೂರಿಯಾಗಿ ನೆರವೇರಿತು. ಮೊದಲನೆಯ ವರ್ಷಕ್ಕೆ ಅಂಬಿಕೆಗೆ ದೃತರಾಷ್ಟ್ರ ಹುಟ್ಟಿದ್ದ. ಆದರೆ ಮಗು ಕುರುಡಾಗಿತ್ತು. ಇದರಿಂದ ಬೇಸತ್ತ ನಾನು ಅಂಬಾಲಿಕೆಯ ಮಗುವಿಗಾಗಿ ಕಾದು ಕುಳಿತಿದ್ದೆ. ದೃತರಾಷ್ಟ್ರ ಹುಟ್ಟಿದ ವರ್ಷಕ್ಕೆ ಅಂಬಾಲಿಕೆಗೆ ಪಾಂಡು ಹುಟ್ಟಿದ. ತುಂಬಾ ಸ್ಪುರದ್ರೂಪಿ ಮಗು. ಅದನ್ನು ನೋಡುತ್ತಿದ್ದಂತೆ ಪ್ರೀತಿ ಉಕ್ಕುತ್ತಿತ್ತು. ಪಾಂಡು ಹುಟ್ಟಿ ಅರು ತಿಂಗಳಾಗಿತ್ತು. ಆಗ ನಮ್ಮ ಅರಮನೆಗೆ ಭಾರ್ಗವರು ಬಂದಿದ್ದಾರೆಂದು ರಾಜ ಭಟರು ತಿಳಿಸಿದರು. ಭಾರ್ಗವರು ಕ್ಷತ್ರೀಯ ಕುಲವನ್ನೇ ವಿನಾಶಗೊಳಿಸುವುದಾಗಿ ಪಣತೊಟ್ಟಿದ್ದ ಪರಶುರಾಮರ ವಂಶದ ಕುಡಿ. ಅವರನ್ನು ಕಾಣಲು ಅವರಿದ್ದ ಸ್ಥಳಕ್ಕೆ ಧಾವಿಸಿದೆ. ಅವರ ಜೊತೆಯಲ್ಲಿ ಒಬ್ಬಳು ಸಾದ್ವಿ ಇರುವಂತೆ ತೋರಿತು. ಬಳಿ ಬಂದು ಹತ್ತಿರದಿಂದ ನೋಡಿದಾಗ, ಆಘಾತವಾಯಿತು ಸಾಧ್ವಿ ಬೇರಾರೂ ಅಲ್ಲ. ಅಂಬೆ.!!

ದೇವವ್ರಥ.. ಜನರೆದುರು ನೀನಾರಿಗೂ ಮೋಸ ಮಾಡಿಲ್ಲ ಎಂದು ಸುಳ್ಳು ನುಡಿಯುವುದೇಕೆ.?? ವ್ಯಾಘ್ಹ್ರ ನೀನು, ನಿನಗೆ ಗೋವಿನ ತೊಗಲೇಕೆ.??” ಭಾರ್ಗವರು ಅಬ್ಬರಿಸಿದಾಗ ಹೇಗೆ ಉತ್ತರಿಸಬೇಕು ಎಂಬುದನ್ನು ಯೋಚನೆ ಮಾಡುತ್ತಾ ನಿಂತೆ, ಮೌನಕ್ಕೆ ಸಂಧಾನದ ಪರಿ ತಿಳಿದಿಲ್ಲ ಎನ್ನಿಸಿಯೋ ಏನೋ, “ನಾನು ಮಾಡಿದ ತಪ್ಪಾದರೂ ಏನು.??” ಎಂದೆ. ಅದಕ್ಕೆ ಅವರು ಅಂಬೆಯನ್ನು ತೋರಿಸಿ, “ನೀನಾವ ಸ್ಥ್ರೀಯರಿಗೂ ತೊಂದರೆ ನೀಡಿಲ್ಲ ಎಂದು ಜನರೆದುರು ನಟಿಸಿದ್ದು ಸಾಕು. ಈಕೆಗಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡುತ್ತೇನೆಂದು ಈಕೆಗೆ ಮಾತು ಕೊಟ್ಟಿದ್ದೇನೆ. ಈಕೆಗೆ ಅನ್ಯಾಯ ಆಗಿದ್ದು ನಿನ್ನಿಂದ ಅದಕ್ಕೆ ನಿನ್ನಲ್ಲಿಗೆ ಬಂದಿರುವುದು”. ಆಗ ನಾನುಅದನ್ನು ಅನ್ಯಾಯ ಎಂದು ಹೇಗೆ ಕರೆಯುತ್ತೀರಿ.?? ಆಕೆಯ ಪ್ರೇಮದ ವಿಚಾರ ನಾನು ಸ್ವಯಂವರಕ್ಕೆ ಹೋದಾಗ ತಿಳಿದಿರಲಿಲ್ಲ. ಅಷ್ಟಿದ್ದೂ ಅವರ ತಂದೆ ಕಾಶೀರಾಜ ಪ್ರತಾಪಸೇನ ಈಕೆಯನ್ನು ಸಾಲ್ವನಿಗೇ ಕೊಟ್ಟು ವಿವಾಹ ಮಾಡಬಹುದಿತ್ತಲ್ಲ. ಸ್ವಯಂವರ ಏರ್ಪಡಿಸಿದ್ದು ಅವರ ತಪ್ಪು. ನಾನು ನ್ಯಾಯವಾಗೇ ಅಲ್ಲಿನ ರಾಜರನ್ನೆಲ್ಲಾ ಮಣಿಸಿ ಮೂರ್ವರನ್ನು ಕರೆ ತಂದದ್ದು. ಎಲ್ಲವೂ ತಿಳಿಯದೇ ಅದ ತಪ್ಪುಗಳು. ಅದಕ್ಕೆ ಅನ್ಯಾಯವೆನ್ನುವುದರ ಬದಲು, ವಿಧಿ ಲಿಖಿತ ಎನ್ನಬಹುದುಎಂದೆ. ಭಾರ್ಗವರು ಏನನ್ನೋ ತರ್ಕಿಸುತ್ತಿರುವವರಂತೆ ನಿಂತರು. ನಾನು ಸೂರ್ಯ ಮುಳುಗುತ್ತಿರುವುದನ್ನು ನೋಡಿ, “ಇದನ್ನೆಲ್ಲಾ ಯಾರೂ ಮಾಡಬೇಕೆಂದು ಮಾಡಿದ್ದಲ್ಲ. ಎಲ್ಲವೂ ಆಕಸ್ಮಿಕವಾಗಿ ಘಟಿಸಿದವು. ಇದರ ಬಗ್ಗೆ ಕೂಲಂಕುಷವಾಗಿ ಯೋಚಿಸಿ. ಮತ್ತೆ ನಾಳೆ ಮಾತನಾಡೋಣ. ಈಗ ವಿಶ್ರಾಂತಿ ತೆಗೆದುಕೊಳ್ಳಿಎಂದು ಅವರನ್ನು ರಾಜಭಟರೊಂದಿಗೆ ಕಳುಹಿಸಿಕೊಟ್ಟೆ.

ಮರುದಿನ ಬೆಳಿಗ್ಗೆ ಉಪಹಾರದ ನಂತರ ಅವರನ್ನು ಕಾಣಲು ಹೋದೆ. ಆಗಲೇ ಅಂಬೆಯೂ ಉಪಹಾರ ಮುಗಿಸಿ ಭಾರ್ಗವರ ಕೋಣೆಗೆ ಬಂದಿದ್ದಳು. ನಾನು ಕುಶಲೋಪರಿಯನ್ನು ವಿಚಾರಿಸಿದೆ. ನಂತರ ಭಾರ್ಗವರು ಅಂಬೆಯ ವಿಚಾರವನ್ನು ಮಾತನಾಡಿದರು. “ತಪ್ಪು ತಿಳಿಯದೆ ಆಯಿತೋ, ತಿಳಿದು ಆಯಿತೋ ತಿಳಿಯದು. ಆದರೆ ತಪ್ಪು ಆಗಿದೆ. ಗಂಡಸರ ಪ್ರತಿಷ್ಠೆಗೆ ಹೆಣ್ಣುಮಗಳೊಬ್ಬಳ ಬದುಕು ಹರಣವಾಗಿದೆ. ನೀನು ನಿನ್ನ ಪ್ರತಿಷ್ಠೆಗೆ ಸ್ವಯಂವರಕ್ಕೆ ಲಗ್ಗೆಯಿಟ್ಟೆ. ಅಲ್ಲಿ ಸಾಲ್ವ ಸೋತದ್ದನ್ನು ಪಡೆದರೆ ರಾಜಪದವಿಗೆ ಅಗೌರವವೆಂದು ಈಕೆಯನ್ನು ತಿರಸ್ಕರಿಸಿದ. ಇನ್ನು ಮರಳಿ ಈಕೆ ಇಲ್ಲಿಗೆ ಬಂದು ವಿಚಿತ್ರವೀರ್ಯನನ್ನು ವಿವಾಹವಾಗಲು ಸಮ್ಮತಿ ಸೂಚಿಸಿದಾಗ ನೀನು ಏನಂದೆ, ಪರಪುರುಷನೊಂದಿಗೆ ಮೋಹಿತಳಾಗಿ ಅರಮನೆ ಬಿಟ್ಟವಳಿಗೆ ರಾಜಪೀಠಸ್ಥನಾದ ನಿನ್ನ ತಮ್ಮನಿಗೆ ತಂದುಕೊಳ್ಳಲು ಸಾಧ್ಯವಿಲ್ಲ ಎಂದೆಯಂತೆ.??” ಎಂದು ಭಾರ್ಗವರು ನುಡಿದಾಗ, ನಾನುಹೌದು ಆದರೆ ಎಲ್ಲಾ ಪ್ರತಿಷ್ಠೆಗಳು ನೆಪ ಮಾತ್ರ. ಎಲ್ಲವೂ ವಿಧಿ ಲಿಖಿತಎಂದೆ. “ವಿಧಿ ಲಿಖಿತ ಎನ್ನುವುದು ಮಾನವನ ಪರಿಮಿತಿಯ ಹೊರಗಿನ ವಿಚಾರ. ಧೀರ್ಘವಾಗಿ ಯೋಚಿಸಿದ ನಂತರ ನನಗೆ ಅನ್ನಿಸಿದ್ದು ಏನೆಂದರೆ, ಅನ್ಯಾಯಗಳಿಗೆಲ್ಲಾ ನೀನೇ ಕಾರಣ ಎಂಬುದು. ಅದಕ್ಕೆ ನ್ಯಾಯ ನಿನ್ನಿಂದಲೇ ಸಿಗಬೇಕುಎಂದರು. ಅದಕ್ಕೆ ನಾನುಈಗ ನಾನು ಮಾಡಬೇಕಾದದ್ದಾದರೂ ಏನು.??” ಎಂದೆ. ಅದಕ್ಕೆ ಅವರುಅಂಬೆಯನ್ನು ನಿನ್ನ ತಮ್ಮನಿಗೆ ತಂದುಕೋಎಂದರು. “ಇಲ್ಲಾ, ಇದರಿಂದ ನನ್ನ ವಂಶದ ಘನತೆಗೆ ಧಕ್ಕೆಯಾಗುತ್ತದೆ. ನಾನು ಸತ್ತರೂ ಸರಿಯೇ ಇದಕ್ಕೆ ನಾನು ಒಪ್ಪುವುದಿಲ್ಲಎಂದೆ ನೇರವಾಗಿ. “ಹಾಗಿದ್ದರೆ, ನೀನೇ ವಿವಾಹವಾಗು.??” ಎಂದರು. “ಸಾಧ್ಯವಿಲ್ಲ. ಮಾಡಿದ ಪ್ರತಿಜ್ಞೆಯನ್ನು ಮೀರಲೊಲ್ಲೆಎಂದೆ. “ಅಪ್ಪನ ಕಾಲದ ಮಾತಿಗಿಂತ ಕನ್ಯೆಯೊಬ್ಬಳ ಬದುಕು ಮುಖ್ಯ”. ಎಂದರು. “ಇಲ್ಲ ಕೊಟ್ಟ ಮಾತೇ ಮುಖ್ಯಎಂದೆ. “ಹಾಗಿದ್ದರೆ ಇಗೋ ನೋಡು. ನಾನು ಇವಳಿಗೆ ನ್ಯಾಯ ಕೊಡಿಸುತ್ತೇನೆ ಎಂದು ಮಾತು ಕೊಟ್ಟಿದ್ದೇನೆ ಅದನ್ನು ಉಳಿಸಿಕೊಳ್ಳಬೇಕಿದೆಎಂದರು. ನಾನುಅದಕ್ಕೆಎಂದೆ. “ನಮ್ಮ ನಡುವೆ ಯುದ್ಧವಾಗಲಿ, ನೀನು ಗೆದ್ದರೆ ನಿನ್ನ ಮಾತು ನಡೆಯಲಿ. ನಾನು ಗೆದ್ದರೆ ನನ್ನ ಮಾತು ನಡೆಯಲಿಎಂದರು. ನಾನುನೀವು ನೀವು ಬ್ರಾಹ್ಮಣ ಪುರುಶೋತ್ತಮರು, ನಿಮ್ಮೊಡನೆ ಯುದ್ಧ.!!” ಎಂದೆ. “ಯಾರೂ ಇಲ್ಲದಾಗ ನಮ್ಮ ತಾತ ಜಮದಗ್ನಿಯನ್ನು ಕೊಂದ ಕುಲದವರಲ್ಲವೇ ನಿನ್ನದು. ನನ್ನೊಡನೆ ಯುದ್ಧ ಮಾಡುವುದಕ್ಕೇಕೆ ತಕರಾರು.?? ಸೋಲುವ ಭಯವೋ.??” ಎಂದರು. ನನ್ನ ಕುಲವನ್ನು ಜರಿದಾಗ ಕೋಪ ಉಮ್ಮಳಿಸಿ ಬಂತು. ನನ್ನ ಕುಲದ ಅದೆಷ್ಟೋ ಮುಗ್ಧ ಜನರನ್ನು ಕೊಂದ ಪರಶುರಾಮರ ರಕ್ತದ ಕುಡಿಯನ್ನು ನಾನು ಕೊಂದರೆ ನನಗೆ ಪಾಪಗಳು ಸುತ್ತುವುದಿಲ್ಲ ಎನ್ನಿಸಿ ಯುದ್ಧಕ್ಕೆ ಒಪ್ಪಿಗೆ ಕೊಟ್ಟೆ.

ಮಲ್ಲಯುದ್ಧ ಮಾಡುವುದೆಂದು ತೀರ್ಮಾನಿಸಿ., ಇಬ್ಬರೂ ಸಿದ್ಧವಾಗಿ ಯ್ಯುದ್ಧರಂಗಕ್ಕಿಳಿದೆವು. ಬಾರ್ಗವರು ಬ್ರಾಹ್ಮಣರಾಗಿದ್ದರೂ ಗಟ್ಟಿಮುಟ್ಟಾದ ದೇಹ ಅವರದು. ದಿನವೂ ಅಂಗ ಸಾಧನೆ ಮಾಡುವ ನನಗೆ ಇವರು ಸರಿಯಾದ ಪ್ರತಿಸ್ಪರ್ಧಿ ಎನ್ನಿಸಿತು. ಅವರ ವೇಗವನ್ನು ತಿಳಿಯಲು ನಾನು ಮೊದಲು ನಿಧಾನಕ್ಕೆ ಚಲಿಸುತ್ತಿದ್ದೆ. ಅವರು ತುಂಬಾ ವೇಗವಾಗಿ ಪಟ್ಟುಗಳನ್ನಾಕುತ್ತಿದ್ದರು. ನಾನೂ ವೇಗವನ್ನು ಹೆಚ್ಚಿಸಿದೆ. ಅವರು ಸ್ವಲ್ಪ ಬೆದರಿದಂತೆ ಕಂಡರೂ ಧೈರ್ಯವಾಗಿ ಮುನ್ನುಗ್ಗಿದರು. ಸಮಯದಲ್ಲಿ ಅವರ ಕಾಲು ನನ್ನ ಕೈಯಲ್ಲಿ ಸಿಕ್ಕಿಹಾಕಿಕೊಂಡಿತು. ಅದನ್ನು ಗಟ್ಟಿಯಾಗಿ ಹಿಡಿದು ತಿರುವಿದೆ. ತಿರುಗಿಸಿದ ರಭಸಕ್ಕೆ ಕಾಲು ಮುರಿಯಿತು. ಬಾರ್ಗವರು ಮೇಲೇಳಲಾಗದೆ ತಡಬಡಿಸಿದರು. ನಾನು ರಾಜಭಟರನ್ನು ಕರೆದು ಶುಶ್ರೂಷೆ ಮಾಡಲು ಹೇಳಿದೆ. ಯುದ್ಧ ಮಾಡುವುದನ್ನೇ ನೋಡುತ್ತಿದ್ದ ಅಂಬೆ, ಬಾರ್ಗವರು ಸೋಲುವುದು ತಿಳಿಯುತ್ತಿದ್ದಂತೆ ಓಡಿದಳು. ಬ್ರಾಹ್ಮಣ ಋಷಿಗಳು ಹೋಮ ನಡೆಸುತ್ತಿದ್ದಲ್ಲಿಗೆ ಹೋಗಿ., ಅವರನ್ನೆಲ್ಲಾ ದೂರ ಹೋಗುವಂತೆ ಆಜ್ಞಾಪಿಸಿ. ಅದರ ಎದುರು ನಿಂತಳು.

ಕೇಳಿರೈ ದಶ ದಿಕ್ಕುಗಳೇ, ದಿಕ್ಪಾಲಕರೇ, ಮರೆಯಲಿ ಹೊಂಚು ಹೂಡುವ ವಿಧಿಯೇ, ಹೂವಾಗಿ ಹರಳಲಿದ್ದ ನನ್ನ ಬದುಕಿಗೆ ಕೊಳ್ಳಿಯಿಟ್ಟ ದೇವವ್ರಥನಿಗೆ ಕೆಡುಕಾಗಲಿ, ಇವನಿಗೆ ಮುಕ್ತಿ ಸಿಗದೆ ಹಂಗಿನಲ್ಲಿ ಸಾಯಲಿ. ನನಗೂ ಮರುಜನ್ಮ ಇರುವುದಾದರೆ ಇವನು ನನ್ನಿಂದಲೇ ಹತನಾಗಲಿ. ಇವನು ಹೆಮ್ಮೆ ಪಡುವ ಅವನ ವಂಶ ಛಿದ್ರವಾಗಲಿ. ಹೆಣ್ಣೊಬ್ಬಳ ಕಣ್ಣೀರಿಗೆ ಬೆಲೆಯಿರುವುದಾದರೆ ನಾನಿತ್ತ ಶಾಪ ಸತ್ಯವಾಗಲಿ. ಇಲ್ಲವೇ ಲೋಕವೇ ಸತ್ತು ಸುಳ್ಳಾಗಲಿ. ಇಗೋ ಅಗ್ನಿದೇವ, ನಿನಗೆ ನನ್ನ ದೇಹವನ್ನೇ ಅರ್ಪಿಸುತ್ತೇನೆ, ಹೆಚ್ಚು ಸುಡದೆ ಸ್ವೀಕರಿಸುಎಂದು ಕೂಗುತ್ತಿದ್ದಾಳೆ ಅಂಬೆ. ಮುಂದೇನಾಗುತ್ತಿದೆ ಎನ್ನುತ್ತಿರುವಾಗಲೇ ಅಂಬೆ ಅಗ್ನಿಕುಂಡಕ್ಕೆ ಹಾರಿದಳು. ಜ್ವಾಲೆ ಬಾನು ಮುಟ್ಟುವಂತೆ ಹಬ್ಬಿತು. ಎಲ್ಲವೂ ಒಮ್ಮೆಲೆ ಸ್ತಬ್ಧವಾಯಿತು. ಮೆಲ್ಲಗೆ ಮೊಳೆದ ಭೀತಿ ಒಳಗೆಲ್ಲಾ ಹರವಿಕೊಂಡಿತು.


ಈಗ ನಾನು ಸಾಯುವುದೊಂದೇ ಪಾಪವನ್ನು ತೊಳೆದುಕೊಳ್ಳುವ ಮಾರ್ಗವೆಂದು ನನಗೆ ಭಾಸವಾಗುತ್ತಿದೆ. ಜೀವನದುದ್ದಕ್ಕೂ ಪರಸ್ತ್ರೀ ಹತ್ಯೆಗೆ ಕಾರಣನಾಗಿ ಬದುಕುವುದಕ್ಕೆ ಸಾಧ್ಯವಿಲ್ಲವೆನ್ನಿಸಿತು. ಒಮ್ಮೆಗೆ ನಾನೂ ಅಗ್ನಿಕುಂಡಕೆ ಹಾರಿ ನೋವಿನ ಮೂಟೆಗಳನ್ನು ಧಗಿಸಬೇಕು ಎಂದುಕೊಂಡೆ. ನಾನೂ ಅಗ್ನಿಕುಂಡದೆದುರು ನಿಂತು ಹಾರಲು ಅಣಿಯಾದಾಗ, “ನಿಲ್ಲು ಭೀಷ್ಮಯಾರದೋ ಪರಿಚಿತ ದ್ವನಿ ಮೊಳಗಿತು. ಯಾರು ಎಂದು ನೋಡಿದಾಗ ನಾರದ ಮಹರ್ಷಿಗಳು ನಿಂತಿದ್ದಾರೆ. “ಇಲ್ಲಿ ಯಾವುದಕ್ಕೂ ನೀನು ಕಾರಣವಲ್ಲ, ಎಲ್ಲವೂ ನಾರಾಯಣ ಚಿತ್ತ. ಅವನು ಹೇಳಿದಂತೆ ಕುಣಿಯುವವರು ನಾವು. ಅವನು ಕುಣಿಸುತ್ತಾನೆ, ನಾವು ಕುಣಿಯಬೇಕು. ನಿನ್ನದಲ್ಲದ ತಪ್ಪಿಗೆ ನೀನು ಸಾಯುವುದು ತರವಲ್ಲ. ಇನ್ನೂ ನೀನು ನೋಡಬೇಕಾದ ಬದುಕು ಸಾಕಷ್ಟಿದೆಎಂದು ಅವರು ಹೇಳಿದಾಗ ನನಗೆ ಏನು ಹೇಳಬೇಕೆಂದು ತೋಚುತ್ತಿಲ್ಲ. ಸದ್ಯ ನಾನು ಸತ್ತಿಲ್ಲವಾದರೂ, ಬದುಕಿಯೂ ಇಲ್ಲ ಎಂಬ ಶೂನ್ಯತೆ ಆವರಿಸುತ್ತಿದೆ.!!