Wednesday, September 10, 2014

ಸೊಸೆ ಮುಟ್ಟಾಗಿದ್ದಾಳೆ.!!

ಕೊರಳಿಗೆ ತಾಳಿ ಬಿದ್ದು
ವರುಷಗಳೇ ಕಳೆದಿದೆ.
ಹೊಟ್ಟೆ ತುಂಬಿಲ್ಲ.
ಮಗುವಿನ ಹೂನಗೆ
ಮನೆಯೆಲ್ಲಾ ಹಬ್ಬಿಲ್ಲ.
ಬಂಜರಲ್ಲಿ ಹೂ ಅರಳುತ್ತದೆಯೇ?
ಅತ್ತೆ ಕೊರಗುತ್ತಾಳೆ.
ಈಗ ಮತ್ತೇ
 ಸೊಸೆ ಮುಟ್ಟಾಗಿದ್ದಾಳೆ.!!

ಎಲ್ಲಾದರು ಮಗುವಿನ ಅಳು
ಕೇಳಿದರೆ ಸಾಕು,
ಎದೆ ದಸಕ್ ಎನ್ನುತ್ತದೆ.
ಮಗುವನ್ನು ಎತ್ತಿ ಮುದ್ದಾಡಿ,
ಊರಿನ ಬೀದಿ ಬೀದಿಗಳಲ್ಲಿ
ಅಪ್ಪಾಲೆತಿಪ್ಪಾಲೆ ಆಡುವ
ಆಸೆಯಲ್ಲಿ ಮಾವ ನರಳುತ್ತಾನೆ.
ಈಗ ಮತ್ತೇ
ಸೊಸೆ ಮುಟ್ಟಾಗಿದ್ದಾಳೆ.!!

ಮನೆಯವರಲ್ಲೇ ಹೊರಗಿನವಳಾಗಿ,
ಹೊರಗಾಗಿ,
ಕೊಟ್ಟಿಗೆಯೊಳಗೆ ಹರಿದ
ಚಾಪೆಯ ಮೇಲೆ
ಸೊಸೆ ಹೊರಳುತ್ತಾಳೆ.
ಕರು ಹಸುವಿನ ಮೊಲೆಯನ್ನು
ಸೀಪುತ್ತಿದ್ದರೆ,
ಎದೆ ಉಕ್ಕುತ್ತದೆ.
ತಾಯ್ತನ ನರಳುತ್ತದೆ.

ಮಣ್ಣು ಎಷ್ಟೇ ಹದವಾಗಿದ್ದರೂ,
ಚಿಗುರು ಮೊಳೆಸುವ ಸತು ಬೀಜಕ್ಕಿರಬೇಕು.
ಈಗ ಮತ್ತೇ
ಸೊಸೆ ಮುಟ್ಟಾಗಿದ್ದಾಳೆ.!!

-ಡಿ.ವಿ.ಪಿ-

1 comment:

  1. ನಿನ್ನಲ್ಲಿ ಇತ್ತೀಚೆಗೆ ಕಳೆದು ಹೋಗಿದ್ದ ಕವಿಯನ್ನು ಹುಡುಕಿಕೊಂಡಿದ್ದೀಯ, ಈ ಪದ್ಯದಲ್ಲಿ. ಪದ್ಯ ಕಟ್ಟುವ ಕಲೆಯಲ್ಲಿ ಪಳಗಿದಂತೆ ಕಂಡುಬರುವ ನಿನ್ನ ಪಟ್ಟುಗಳು, ತನ್ನ ಮೊನಚನ್ನು ಉಳಿಸಿಕೊಳ್ಳುವ ಅಗತ್ಯವಿದೆ. ನೀರೀಕ್ಷೆಗಳನ್ನು ಹುಟ್ಟಿಸುವ ಕವಿಯ ಲೇಖನಿ ಎಂದಿಗೂ ಮೌನವಾಗಬರದು. ಮೌನವಾದರೆ ಜಡ್ಡು ಹಿಡಿದು, ಮೌಲ್ಯ ಕಳೆದುಕೊಳ್ಳುತ್ತದೆ. ಪ್ರತಿಭೆ ಗುರಿ ತಲುಪದೆ ನರಳುತ್ತದೆ. ಪದ್ಯ ಕಟ್ಟುವ ಶ್ರದ್ಧೆಯನ್ನುಳಿಸಿಕೊಂಡು ಹೋಗೆಂದು ಹಾರೈಸ್ತೀನಿ.

    ತಾಯ್ತನದ ಸುಖಕ್ಕೆ ಹಾತೊರೆಯುವ ಹೆಣ್ಣೊಬ್ನಳ ತಾಕಲಾಟಗಳು, ಮನೆಯವರ ಚಡಪಡಿಕೆ ಮತ್ತು ಗೊಣಗಾಟಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ್ದೀಯ. ಭೇಷ್!

    ಕರು ಹಸುವಿನ ಮೊಲೆಯನ್ನು
    ಸೀಪುತ್ತಿದ್ದರೆ,
    ಎದೆ ಉಕ್ಕುತ್ತದೆ.
    ತಾಯ್ತನ ನರಳುತ್ತದೆ.

    ಈ ಇಮೇಜ್ ನ ಪ್ರಯೋಗ ಬಹುವಾಗಿ ಸೆಳೆಯುತ್ತದೆ. ಪದ್ಯದ ಪರಿಕರಗಳನ್ನು ಹೆಕ್ಕಿ ಬಳಸಿಕೊಳ್ಳುವುದೂ ಒಂದು ಜಾಣ್ಮೆ. ಇಷ್ಟ ಆಯ್ತು.

    ReplyDelete