Sunday, February 8, 2015

ದೀಪದ ಬುಡ್ಡಿ ಕಳೆದು ಹೋಗಿದೆ.

ನಾಲ್ಕು ಗೋಡೆಯೊಳಗಣದ
ತಮಾವೃತ ಅಂಗಳದೆದೆಯಲ್ಲಿ
ಹಚ್ಚಿಟ್ಟಿದ್ದ ದೀಪದ ಬುಡ್ಡಿ 
ಕಳೆದುಹೋಗಿದೆ.
ಕತ್ತಲೊಳಗೆ ಬದುಕು 
ಸಹ್ಯವಾಗಿಸುವುದೀಗ ಅನಿವಾರ್ಯ.
ಇಲ್ಲವೇ ಕತ್ತಲೊಳಗೇ
ಲೀನವಾಗಿಬಿಡುವ ಭಯ.

ಯಾವ ದಿಕ್ಕಿನ ಸುಳಿಗಾಳಿ
ಬೆಳಕನ್ನು ನುಂಗಿ.,
ತವವನ್ನು ಅಡರಿಹೋಯಿತೋ.?
ಯಾವ ಕತ್ತಲ ಪಹರೆ
ಬೆಳಕಿನೊಂದಿಗೆ ಯುದ್ಧ 
ಹೂಡಿ ಸದ್ದಡಗಿಸಿತೋ.?

ಯಾವ ಮಾಯದ ಶಕುತಿ
ಬೆಳಕಿನಾತ್ಮವ ಇಂಗಿಸಿತೋ.??
ಯಾವ ಯಕ್ಷ ದನಿ
ಬೆಳಗಿಗೆ ಚಾರಣ ಗೀತೆ ಹಾಡಿತೋ.??
ಯಾರು ಏನು ಮಾಡಿದರೋ,
ಯಾರು ಕದ್ದೊಯ್ದರೋ,
ದೀಪದ ಬುಡ್ಡಿ ಕಳೆದುಹೋಗಿದೆ.

ಈ ಕತ್ತಲೋ,
ನೀರವತೆಯ ಬಿಂದುವಿನೆಡೆಗೆ ಸೆಳೆದು.,
ಇದ್ದೂ ಇಲ್ಲದಾಗಿಸಿ
ಇಲ್ಲದೆಯೂ ಇರುವಂತಾಗಿಸಿ.
ಶೂನ್ಯತೆಯ ಒಡಲೊಳಗೆ
ಹೂತುಬಿಡುತ್ತದೆ,
ಮತ್ತೊಮ್ಮೆ ಬೆಳಕು
ಹೊತ್ತಿಸಲಾಗದಂತೆ.!!

-ಡಿ.ವಿ.ಪಿ-
೮/೨/೧೫

Friday, February 6, 2015

ದೇವರೆಲ್ಲಿದ್ದಾನೆ ಹೇಳೆ ಸಖೀ.

ಬೆತ್ತಲು ಜಗದೊಳಗೆ ರಕ್ಕಸರ
ಕೈಗೆ ಸಿಕ್ಕು ಅದೆಷ್ಟೋ ದ್ರೌಪದಿಯರು
ಬೆತ್ತಲಾಗುತ್ತಿದ್ದಾರೆ.
ಹೂಗಳು ಮುರುಟಿ ಹೋಗುತ್ತಿವೆ.
ವಸ್ತ್ರಧಾರಣೆ ಮಾಡಲು ದೇವರು ಬರಲಿಲ್ಲ.
ನಿನ್ನ ದೇವರು ಎಲ್ಲಿದ್ದಾನೆ ಹೇಳೆ ಸಖೀ.

ದಿನವೂ ಅರಗಿನರಮನೆಗಳಿಗೆ
ಬೆಂಕಿ ಬೀಳುತ್ತಲೇ ಇದೆ.
ಅಟ್ಟಹಾಸದ ಜಳಪಿಗೆ
ದೇಹಗಳು ಸುಟ್ಟು ಕರಕಲಾಗುತ್ತಿವೆ.
ರಕ್ಷಿಸಲು ದೇವರು ಬರಲಿಲ್ಲ.
ನಿನ್ನ ದೇವರು ಎಲ್ಲಿದ್ದಾನೆ ಹೇಳೆ ಸಖೀ.

ಹಡೆದ ಬಳ್ಳಿಗೆ ಸುಮವು ಭಾರವಾದಂತೆ,
ಗಾಳಿಯ ಬಿರುಸಿಗೆ ಸುಮವು ನೆಲಪಾಲು.
ಬೇರಿನಿಂಬಿಲ್ಲದ ಸುಮಕ್ಕೆ
’ಅನಾಥ’ ಹಣೆಪಟ್ಟಿ.
ಹುಟ್ಟಿನ ಗುಟ್ಟು ರಟ್ಟು ಮಾಡಲು
ದೇವರು ಬರಲಿಲ್ಲ.
ನಿನ್ನ ದೇವರು ಎಲ್ಲಿದ್ದಾರೆ ಹೇಳಿ ಸಖೀ.

ಸತ್ತು ಬೆತ್ತಲಾದವರಿಗೆಲ್ಲಾ ಜೀವ ಬಂದಿದೆ.
ತೊಗಲುಗಳೇರಿಸಿಕೊಂಡು ಬದುಕಿರುವವರು
ನಿರ್ಲಿಪ್ತತೆಯ ಮಡಿಲಿನಲ್ಲಿ ಅಸುನೀಗುತ್ತಿದ್ದಾರೆ.
ವರ್ತಮಾನ ತಂದ ವರದಿ.,
ದೇವರು ಸ್ಮಶಾನದ ಹಾದಿ ಹಿಡಿದಿದ್ದಾರಂತೆ.
ಬೆಂತರಗಳು ಊರುಗಳ ಹೊಕ್ಕಿವೆಯಂತೆ.
ಸ್ಮಶಾನದ ಹಾದಿ ತೋರೆ ಸಖೀ.

-ಡಿ.ವಿ.ಪಿ-

Wednesday, December 24, 2014

ಹೃದಯ ಮಾರಿಕೊಂಡವರು.!!

ದಿಕ್ಕೆಟ್ಟ ಮನಸ್ಸುಗಳಿಗೆ
ಸಾವು ಸಂಭವಿಸಿ,
ಭಾವಗಳು ಸ್ತಬ್ಧವಾಗಿವೆ.!!
ನಿರ್ವಾತದಲ್ಲಿ ಕುಡಿಯೊಡೆದ ಮೊಗ್ಗು
ನಿರ್ಲಿಪ್ತವಾಗಿ ಅರಳಿದೆ.
ಮೂರು ಕಾಸಿಗೆ ಬಿಕರಿಯಾಗಿದೆ.
ಹೃದಯ ಮಾರಿಕೊಂಡವರ
ಬದುಕೇ ಹೀಗೇ,
ಇದ್ದೂ ಇಲ್ಲದಿರುವಾ ಹಾಗೇ.!!


ಪ್ರದರ್ಶನಕ್ಕಿಟ್ಟ ಹೂವಿನೆದೆಯಿಂದ
ಗಂಧ ಹೊಮ್ಮಲಿಲ್ಲ.
ಬಂದವರೆದುರು ಹದವಾಗಿ
ಬಿರಿದ ಮೈದೋರಿ,
ಬಣ್ಣಗಳ ಸುಳಿಯಲ್ಲಿ
ಎಲ್ಲವನ್ನೂ ಸೆಳೆದು,
ಜನಸಂದಣಿ ಸವೆಯುವ
ತನಕ ನಕ್ಕಂತೆ ನಿಂತು
ಇರುಳಿಗೆ ಮುರುಟಿಹೋಗುತ್ತದೆ.!!
ಹೃದಯ ಮಾರಿಕೊಂಡವರ
ಬದುಕೇ ಹೀಗೇ.
ಇದ್ದೂ ಇಲ್ಲದಿರುವ ಹಾಗೇ.!!


ಹಕ್ಕಿಯ ಪಂಜರದೊಳಿರಿಸಿ
ಸ್ವಚ್ಛಂದ ಆಗಸದೆಡೆಗೆ
ಹಾರೆಂದರೆ ಹಾರೀತೇ.??
ಯಾವುದೋ ಅಚಲ ತತ್ವದೆ
ಅನಂತ ವೃತ್ತದೆ ತೊಡರಿ,
ರೆಕ್ಕೆ ಬಿಚ್ಚಿ ಹಾರುವ
ಕನಸ್ಸು ಕಾಣುವರು.!!
ಹೃದಯ ಮಾರಿಕೊಂಡವರ
ಬದುಕೇ ಹೀಗೇ.
ಗೂಟಕ್ಕೆ ಜಡಿದ ಹಾಗೇ.!!


ಎಲ್ಲವನ್ನೂ ತೊರೆದು
ಧ್ಯಾನಸ್ಥ ಭಂಗಿಯಲ್ಲಿ ಕುಳಿತವಗೆ,
ಒಂದಷ್ಟು ಜನ ಬಣ್ಣವನ್ನು ಹೊಯ್ದರು,
ಉಳಿದವರು ವರ್ಣಗಳ ತಿಕ್ಕಿ
ಹಸನು ಮಾಡಿದರು.
ನಿರ್ವಿಕಾರ ಮೊಗದೊಳಗೆ
ನಗುವ ಮೂಡಿಸಿದರು.
ದೇವರೇ, ದೇವರೇ ಎಂದು ಕೂಗಿದರು.
ಗುಡಿ, ಪೂಜೆ, ಭಕ್ತಿ
ಮಣ್ಣು ಮಸಿ ಎಂದರು.
ಕುಳಿತವಗೆ ಉಸಿರುಗಟ್ಟಿತ್ತು.!!
ಹೃದಯ ಮಾರಿಕೊಂಡವರ
ಬದುಕೇ ಹೀಗೇ.,
ಬಣ್ಣ ಮಾಸಿದ ಹೂವಿನ ಹಾಗೇ.!!


-ಡಿ.ವಿ.ಪಿ-
೨೪/೧೨/೧೪

Wednesday, November 12, 2014

ಮಣ್ಣ ಮಡಿಲ ಸಾವುಗಳು.!!

ಎಲೆಯೊಂದು ಹತವಾಗಿ
ಟೊಂಗೆಯ ಮೇಲೆ ಬಾಗಿ,
ಟೊಂಗೆ ಕಾಂಡದ ಮೇಲೆ ವಾಲಿ,
ಕಾಂಡವು ಭಾರಕ್ಕೆ ಜೋಲುತ್ತದೆ.
ಗಾಳಿಯಬ್ಬರಕ್ಕೆ ಎದೆಯೆತ್ತಲಾಗದೆ
ಬೇರುಗಳು ಸಿಗಿದು ಹೋಗಿ
ಬುಡ ಮೇಲಾಗುತ್ತದೆ.
ಹೀಗೊಂದು ಸಾವು.!!

ಇದ್ದಕ್ಕಿದ್ದಂತೆ ಉಸಿರು
ಸೊರಗಿ,
ಬೆಳಕಿನ ಕಂಗಳಿಗೆ
ಕಾರಿರುಳು ಕವಿದು,
ಶಿರವು ಶರೀರಕ್ಕೆ ಹೊರೆಯಾಗಿ,
ಶರೀರವು ಬುಡಕ್ಕೆ ಭಾರವಾಗಿ
ಜೀವ ಹೋಗುವ ಹೊತ್ತಿಗೆ
ದೇಹವು ಮಣ್ಣಿನೊಳಗೆ
ಹೊಕ್ಕಿಕೊಳ್ಳುತ್ತದೆ.
ಇಂತೊಂದು ಸಾವು.

ಮಣ್ಣಿನ ಹೊರಗೊಂದು ಸಾವು,
ಮಣ್ಣಿನೊಳಗೊಂದು ಸಾವು.
ಮಣ್ಣಿಗೂ ಸಾವಿಗೂ ಯಾವುದೋ
ತೀರದ ಬಂದ.
ಸಾವುಗಳು ಘಟಿಸುತ್ತಲೇ ಇದೆ.
ದೇಹಗಳು ಮಣ್ಣಲ್ಲಿ ಮಣ್ಣಾಗಿ
ಕರಗುತ್ತಲೇ ಇದೆ.!!

-ಡಿ.ವಿ.ಪಿ-

Wednesday, November 5, 2014

ಕವನ ಅಂತೊಂದು ಕವನ.!!


ಕವನ :
ಜೀವ-ಭಾವಗಳ ಸಮ್ಮಿಲನ.
ಆಗಸದಡ್ಡಗಲಕ್ಕೂ ಹರವಿಕೊಂಡ ವರ್ಣ.
ಗುಪ್ತಗಾಮಿನಿಯ ಜುಳುಜುಳು ಧ್ವಾನ.
ಕಾನನದನಂತ ಮೌನ.!!

ಕವನ :
ಅರಿವಿನ ಹೂರಣ.
ಜ್ಞಾನದ ಸ್ಖಲನ.
ಸುಶ್ರಾವ್ಯ ಗಾನ.
ಒಮ್ಮೊಮ್ಮೆ ನೀರವತೆಯ ತಾನ.

ಕವನ :
ಅಂತರಂಗ ತೋಂತನಾನಾ.
ಅಂಬಿಕಾ ಪದಕಮಲ ದರ್ಶನ.
ಒಮ್ಮೊಮ್ಮೆ ಕಾಲಭೈರವನ ರುದ್ರನರ್ತನ.!!

-ಡಿ.ವಿ.ಪಿ-

Thursday, September 11, 2014

ಜೀವನ ಜಾತ್ರೆ.!!

ಊರಿಗೂರೇ ಸೀರಿಯಲ್ ಸೆಟ್
ಉಡುಪುಗಳನ್ನು ಧರಿಸಿ
ಮಿರಿ ಮಿರಿ ಮಿಂಚುತ್ತಿದೆ.
ಯಾವುದೋ ಜಾತ್ರೆಯಂತೆ.
ಜಾತ್ರೆಯ ನೆವದಲ್ಲಾದರೂ
ಹಾದಿಗುಂಟ ಹಬ್ಬಿಕೊಂಡ
ಹೂಗಳು ನಗಲಿಲ್ಲ.!!

ಜನವೋ ಜನ..
ಅಲೆಯುವವರಲ್ಲಿ ಕಳೆದುಹೋದವರೆಷ್ಟೋ
ಕಳೆದುಹೋದವರಲ್ಲಿ ಉಳಿದವರೆಷ್ಟೋ.
ಏನನ್ನೋ ಹುಡುಕುತ್ತಾ ಹೆಜ್ಜೆ ಸವೆಸುತ್ತಿದ್ದಾರೆ
ಬಹುಶಃ ಅವರವರ ಹೆಜ್ಜೆ ಗುರುತುಗಳನ್ನೇ ಇರಬಹುದು.

ಜಾತ್ರೆಗೆಂದು ಬಂದವರಲ್ಲಿ ಕೆಲವರಿಗೆ
ಹಾದಿ ತಪ್ಪಿದಂತಾಗಿ,
ಎಲ್ಲಿಗೋ ಹೋಗುವುದಕ್ಕೆ
ಮತ್ತೆಲ್ಲಿಗೋ ಹೋಗಿ,
ಮತ್ತೆಲ್ಲೊ ಹೋಗುವುದಕ್ಕೆ
ಇನ್ನೆಲ್ಲಿಗೋ ಹೋಗಿ,
ಬಂದ ದಾರಿಯಲ್ಲೇ ಸುತ್ತುತ್ತಿದ್ದಾರೆ.
ಬಹುಶಃ ಹಾದಿ ವೃತ್ತವೇನೋ.!!

ರಾಟೆ ಏರಿ ಕುಳಿತ ಒಂದಷ್ಟು ಮಂದಿಗೆ
ಗಾಳಿಯಲ್ಲಿ ತೇಲಿದಂತಾಗಿ
’ಹೋ’ ಎಂದು ಚೀರಿಕೊಳ್ಳುತ್ತಾರೆ.
ರಾಟೆ ಸುತ್ತುತ್ತಿದ್ದವನ ಕೈ
ಜೋಮು ಹಿಡಿದಂತಾಗುತ್ತದೆ.!
ವಾಯುವೇಗದಲ್ಲಿ ಓಡುತ್ತಿದ್ದ
ಮರದ ಕುದುರೆಗಳು
ಈಗೇಕೋ ಬಳಲಿದಂತಿವೆ.

ರಸ್ತೆಯ ಆಜುಬಾಜುಗಳಲ್ಲಿ ಪೇರಿಸಿಟ್ಟ
ಆಟಿಕೆಗಳು, ತಿಂಡಿ ತಿನಿಸುಗಳು.
ನಮ್ಮ ನಮ್ಮ ಕನಸು ಆಸೆಗಳಂತೆ
ಬಿಕರಿಯಾಗದೆ ಉಳಿದಿವೆ.
ಇಂದು ಯಾವುದೋ ಜಾತ್ರೆಯಂತೆ.
ಇಡೀ ಊರೇ ಸಂಭ್ರಮದಲ್ಲಿದೆ.
ಇಲ್ಲವೋ ಸಂಭ್ರಮದ ಸೋಗಿನಲ್ಲಿ.!!

-
ಡಿ.ವಿ.ಪಿ-

Wednesday, September 10, 2014

ಸೊಸೆ ಮುಟ್ಟಾಗಿದ್ದಾಳೆ.!!

ಕೊರಳಿಗೆ ತಾಳಿ ಬಿದ್ದು
ವರುಷಗಳೇ ಕಳೆದಿದೆ.
ಹೊಟ್ಟೆ ತುಂಬಿಲ್ಲ.
ಮಗುವಿನ ಹೂನಗೆ
ಮನೆಯೆಲ್ಲಾ ಹಬ್ಬಿಲ್ಲ.
ಬಂಜರಲ್ಲಿ ಹೂ ಅರಳುತ್ತದೆಯೇ?
ಅತ್ತೆ ಕೊರಗುತ್ತಾಳೆ.
ಈಗ ಮತ್ತೇ
 ಸೊಸೆ ಮುಟ್ಟಾಗಿದ್ದಾಳೆ.!!

ಎಲ್ಲಾದರು ಮಗುವಿನ ಅಳು
ಕೇಳಿದರೆ ಸಾಕು,
ಎದೆ ದಸಕ್ ಎನ್ನುತ್ತದೆ.
ಮಗುವನ್ನು ಎತ್ತಿ ಮುದ್ದಾಡಿ,
ಊರಿನ ಬೀದಿ ಬೀದಿಗಳಲ್ಲಿ
ಅಪ್ಪಾಲೆತಿಪ್ಪಾಲೆ ಆಡುವ
ಆಸೆಯಲ್ಲಿ ಮಾವ ನರಳುತ್ತಾನೆ.
ಈಗ ಮತ್ತೇ
ಸೊಸೆ ಮುಟ್ಟಾಗಿದ್ದಾಳೆ.!!

ಮನೆಯವರಲ್ಲೇ ಹೊರಗಿನವಳಾಗಿ,
ಹೊರಗಾಗಿ,
ಕೊಟ್ಟಿಗೆಯೊಳಗೆ ಹರಿದ
ಚಾಪೆಯ ಮೇಲೆ
ಸೊಸೆ ಹೊರಳುತ್ತಾಳೆ.
ಕರು ಹಸುವಿನ ಮೊಲೆಯನ್ನು
ಸೀಪುತ್ತಿದ್ದರೆ,
ಎದೆ ಉಕ್ಕುತ್ತದೆ.
ತಾಯ್ತನ ನರಳುತ್ತದೆ.

ಮಣ್ಣು ಎಷ್ಟೇ ಹದವಾಗಿದ್ದರೂ,
ಚಿಗುರು ಮೊಳೆಸುವ ಸತು ಬೀಜಕ್ಕಿರಬೇಕು.
ಈಗ ಮತ್ತೇ
ಸೊಸೆ ಮುಟ್ಟಾಗಿದ್ದಾಳೆ.!!

-ಡಿ.ವಿ.ಪಿ-